ಮಂಗಳೂರು, ಜು 06 (Daijiworld News/MSP): ಅರ್ಹ ಫಲಾನುಭವಿಗಳಿಗೆ ಸರಕಾರ ನೀಡುತ್ತಿದ್ದ ಪಡಿತರ ಅಕ್ಕಿಯನ್ನು, ಅಕ್ರಮವಾಗಿ ಬೇರೆಡೆಗೆ ಲಾರಿಯಲ್ಲಿ ಸಾಗಾಟ ಮಾಡುವುದನ್ನು ರೆಡ್ ಹ್ಯಾಂಡ್ ಆಗಿ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜು.05 ರ ಶುಕ್ರವಾರ ತಡರಾತ್ರಿ ಕುಲಶೇಖರದ ಬಳಿ ನಡೆದಿದೆ.
ಅರ್ಹ ಫಲಾನುಭವಿಗಳು ಪಡಿತರ ಅಕ್ಕಿ ಪಡೆಯಲೆಂದು ಸ್ಥಳೀಯ ನ್ಯಾಯಬೆಲೆ ಅಂಗಡಿಗೆ ಬಂದರೆ ಅಲ್ಲಿ ಅಕ್ಕಿ ದಾಸ್ತಾನು ಇಲ್ಲ ಎಂದು ಫಲಾನುಭವಿಗಳನ್ನು ಸಾಗ ಹಾಕುತ್ತಿದ್ದರು ಎನ್ನಲಾಗಿದೆ. ಇದರಿಂದ ಅಸಮಧಾನಗೊಂಡಿದ್ದ ಸ್ಥಳೀಯರು ನ್ಯಾಯಬೆಲೆ ಅಂಗಡಿಗೆ ಬರುವ ಅಕ್ಕಿ ಎಲ್ಲಿಗೆ ಸಾಗಾಟವಾಗುತ್ತಿದೆ ಎಂದು ಕಣ್ಣಿರಿಸಿದ್ದರು ಎನ್ನಲಾಗಿದೆ.
ಶುಕ್ರವಾರ ಕುಲಶೇಖರ ಬಳಿ ತಡ ರಾತ್ರಿ ಲಾರಿಯಲ್ಲಿ ಪಶು ಆಹಾರದ ಜೊತೆ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು ಲಾರಿಯನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಅಕ್ರಮವಾಗಿ ಅಕ್ಕಿ ಮಾರಾಟದ ಈ ಜಾಲ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿಗೆ ಮುತ್ತಿಗೆ ಹಾಕಿದ್ದು, ಆರೋಪಿ ಲಾರಿ ಚಾಲಕ ಪರಾರಿಯಾಗಿದ್ದಾನೆ. ಲಾರಿಯಲ್ಲಿ ಸುಮಾರು 50 ಕ್ವಿಂಟಲ್ನಷ್ಟು ಪಡಿತರ ಅಕ್ಕಿಯನ್ನು ಬೇರೆ ಕಡೆಗೆ ಸಾಗಿಸುತ್ತಿರುವುದು ಪತ್ತೆಯಾಗಿದೆ. ಇದು ಕಲ್ಪನೆ ನ್ಯಾಯಬೆಲೆ ಅಂಗಡಿಯಿಂದ ತರಲಾಗುತ್ತಿದ್ದ ಅಕ್ಕಿ ಎಂದು ತಿಳಿದುಬಂದಿದೆ.
ಸ್ಥಳೀಯರು, ಅಕ್ಕಿ ಸಮೇತ ಲಾರಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಹಿಂದೆಯೂ ಬೊಂದೇಲ್ ಬಳಿ ಖಾಸಗಿ ಗೋಡೌನ್ಗೆ ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.