ಬೆಳ್ತಂಗಡಿ, ಜು 07 (Daijiworld News/MSP): ಪುತ್ತೂರಿನಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡನೀಯ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ 5 ಜನ ದುಷ್ಕರ್ಮಿಗಳನ್ನು ತುರ್ತು ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ಬಸ್ ನಿಲ್ದಾಣ ಮುಂಭಾಗ ಶನಿವಾರ ಪ್ರತಿಭಟನೆ ಹಮ್ಮಿಕೊಂಡಿತು.
ತುರ್ತು ವಿಚಾರಣೆಯನ್ನು ನಡೆಸಬೇಕು, ಆರೋಪಿಗಳನ್ನು ಶಿಕ್ಷೆಗೊಳಪಡಿಸುವ ಮೂಲಕ ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಹಾಗೂ ರಾಜ್ಯಾದ್ಯಂತ ಡ್ರಗ್ಸ್ ಮಾಫಿಯಾ ದಂಧೆ ಹೆಚ್ಚಾಗಿದೆ. ಇದನ್ನು ಹತೋಟಿಗೆ ತರುವಲ್ಲಿ ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಿ.
ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಎಬಿವಿಪಿಯ ಹೆಸರಿನೊಂದಿಗೆ ತಳುಕು ಹಾಕಿ ಸಂಘಟನೆಯ ಹೆಸರಿಗೆ ಅವಮಾನ ಮಾಡುವ ವ್ಯವಸ್ಥಿತ ಷಡ್ಯಂತರವೊಂದು ನಡೆಯುತ್ತಿದೆ. ಈ ಘಟನೆಯಲ್ಲಿ ಭಾಗಿಯಾದ ಯಾರೊಬ್ಬರು ಸಂಘಟನೆಗೆ ಸೇರಿದವರಲ್ಲ. ಈ ಕುರಿತು ಅಪಪ್ರಚಾರವನ್ನು ಕೂಡಲೇ ತಡೆಗಟ್ಟಬೇಕು ಮತ್ತು ಇಂತಹ ಜಾಲತಾಣಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪ್ರಮುಖರಾದ ತೀಕ್ಷಿತ್ ದಿಡುಪೆ, ಅಜಯ ಪ್ರಭು, ಸುಮಂತ್, ಪವನ್, ಅಮೃತ್ ಮೊದಲಾದವರು ನೇತೃತ್ವ ವಹಿಸಿದ್ದರು.