ವಿಟ್ಲ ಡಿ 11: ವಿಟ್ಲ ವ್ಯಾಪ್ತಿಯಲ್ಲಿ ಹಾದುಹೋಗುವ ಸುಬ್ರಹ್ಮಣ್ಯ - ಮಂಜೇಶ್ವರ ಅಂತಾರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ೫ ವರ್ಷ ಕಳೆದರೂ ಕಾಮಗಾರಿ ಅರ್ಧಂಬರ್ಧ ಆಗಿದೆ. ರಸ್ತೆ ವಿಸ್ತರಣೆಯಾಗಿದ್ದರೂ ಹಲವೆಡೆ ಸೇತುವೆ ಅಗಲವಾಗಿಲ್ಲ. ಇನ್ನು ಕೆಲವೆಡೆ ತಡೆಗೋಡೆಯಾಗಿಲ್ಲ. ಭೂ ಸ್ವಾಧೀನಗೊಳಿಸಿದರೂ ಫಲಾನುಭವಿಗಳಿಗೆ ಪರಿಹಾರ ನೀಡಿಲ್ಲ. ಅಪಘಾತ ಸಂಭವಿಸಬಹುದಾದ ಜಾಗದಲ್ಲಿ ಅಪಾಯಕಾರಿ ಸನ್ನಿವೇಶ ಬದಲಾಗಿಲ್ಲ. ಇದು ವಿಟ್ಲದ ಬುಳೇರಿಕಟ್ಟೆ, ಪುಣಚ, ಕೇಪು, ಅಳಿಕೆ ಗ್ರಾಮಸ್ಥರ ಅಳಲು. ಸುಬ್ರಹ್ಮಣ್ಯ - ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯು ಪುತ್ತೂರು, ಬುಳೇರಿಕಟ್ಟೆ, ಪುಣಚ, ಕೇಪು, ಅಳಿಕೆ, ಕನ್ಯಾನ, ಕರೋಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ಸಾಗಿ ಕೇರಳದ ಮಂಜೇಶ್ವರ ತಾಲೂಕಿಗೆ ಸೇರುತ್ತದೆ. ಈ ಹೆದ್ದಾರಿಯು ಹಳ್ಳಿ ಭಾಗಗಳಲ್ಲಿ ಸಾಗುತ್ತದೆ. ರಸ್ತೆ ಅತ್ಯಂತ ಉಪಯುಕ್ತವಾಗಿದ್ದು, ನಿತ್ಯ ಸಾವಿರಾರು ವಾಹನಗಳು ಹಾಗೂ ಸಾವಿರಾರು ಮಂದಿ ಸಂಚಾರಕ್ಕೆ ಬಳಸುತ್ತಾರೆ.ಕೆಲ ಕಡೆಗಳಲ್ಲಿ ಕಾಮಗಾರಿ ಪೂರ್ತಿಯಾಗಿಲ್ಲ. ಕಾಮಗಾರಿ ಪೂರ್ತಿಯಾದ ಕೆಲ ಕಡೆಗಳಲ್ಲಿ ಡಾಮರು ಕಿತ್ತುಹೋಗಿದೆ.
ಹಲವು ಭಾಗದಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದರೂ ಚರಂಡಿ ದುರಸ್ತಿಯಾಗಲಿಲ್ಲ. ದೇವಸ್ಯ ಹಾಗೂ ಮಚ್ಚಿಮಲೆ ಸೇತುವೆಗಳಲ್ಲಿ ಬಿರುಮಲೆ ಗುಡ್ಡದ ಹಾಗೂ ಪರ್ಲಡ್ಕ ಭಾಗದ ನೀರಿನ ಹರಿವು ಹೋಗುತ್ತಿದ್ದರೂ, ಅದನ್ನು ಎತ್ತರೀಕರಿಸುವ ಕಾರ್ಯವಾಗಿಲ್ಲ.
ನಿತ್ಯ ಈ ಸೇತುವೆಯಲ್ಲಿ ಸಣ್ಣ ಪುಣ್ಣ ಅಪಘಾತಗಳು ನಡೆಯುತ್ತಲೇ ಇರುತ್ತದೆ. ಅಪಘಾತದಿಂದ ಮೂರು ನಾಲ್ಕು ಜೀವಗಳು ಹೋಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಆದ್ಯತೆ ನೀಡದಿರುವುದು ನಿತ್ಯ ಸಂಚಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಯ ಸೇತುವೆ ಅಗಲವಾಗಲಿಲ್ಲ. ವೆಂಕಟನಗರ ಕಾಲೇಜಿನಲ್ಲಿ ತಿರುವು ಮತ್ತು ಹಲವು ಕಡೆ ತಿರುವುಗಳ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.
ಇದರೊಂದಿಗೆ ಅತೀ ಅಗತ್ಯವಾದ ಮಣಿಲ, ದೇವಸ್ಯ ಹಾಗೂ ಮಚ್ಚಿಮಲೆ ಸೇತುವೆಗಳು ಅನುದಾನವಿಲ್ಲದ ನೆಪದಲ್ಲಿ ಇನ್ನೂ ಕಿರಿದಾಗಿಯೇ ಉಳಿದುಕೊಂಡಿದೆ. ಇಲ್ಲಿ ಅಪಘಾತಗಳ ಸಂಭವನೀಯತೆ ಜಾಸ್ತಿ ಮತ್ತು ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ. ಬೊಳ್ಳಣ ಮತ್ತು ಬೇಜಾರ ಅಪಘಾತ ವಲಯವಾಗಿದೆ. ಅದಕ್ಕೂ ಸೂಕ್ತ ಕ್ರಮಕೈಗೊಂಡಿಲ್ಲ.
ಅತೀ ಅಗತ್ಯವಿರುವ ಪ್ರದೇಶಗಳಲ್ಲಿ ಸೇತುವೆ ನಿರ್ಮಿಸಿಲ್ಲ. ಯಾವುದೇ ಅಪಘಾತ ಸಂಭವಿಸದ ಅಟ್ಲಾರು ಸೇತುವೆಯನ್ನು ಬೃಹತ್ ಮೊತ್ತ ಬಳಸಿಕೊಂಡು ಹೊಸದಾಗಿ ನಿರ್ಮಾಣ ಮಾಡಿರುವ ಉದ್ದೇಶ ಗ್ರಾಮಸ್ಥರಿಗೆ ತಿಳಿಯದಾಗಿದೆ. ಈ ಬಗ್ಗೆ ವಿಶೇಷ ತನಿಖೆಯಾಗಬೇಕಾಗಿದೆ. ಕೃಷಿಕರ ಜಾಗವನ್ನು ಕಬಳಿಸಿ ಪರಿಹಾರ ಕೊಡದೆ ಸತಾಯಿಸುತ್ತಿರುವ ಬಗ್ಗೆಯೂ ದೂರುಗಳು ಬರುತ್ತಿವೆ. ಸಂಬಂಧ ಪಟ್ಟವರು ತಕ್ಷಣ ಪರಿಹಾರ ಒದಗಿಸದಿದ್ದಲ್ಲಿ, ರೈತ ಸಂಘವು ತೀವ್ರ ರೀತಿಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.