ಮಂಗಳೂರು, ಜು 07 (DaijiworldNews/SM): ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೌಢಶಾಲಾ ಸಹಶಿಕ್ಷಕರು, ಗ್ರೇಡ್-2 ವೃಂದ ಟ್ರೇನ್ಡ್ ಗ್ರೇಜುಯೇಟ್ ಟೀಚರ್ಸ್(ಟಿಜಿಟಿ) ಮರು ಹೊಂದಾಣಿಕೆಯ ಬಗ್ಗೆ ರಾಜ್ಯ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಪ್ರೌಢ ಶಾಲೆಗೆ ನೇಮಕಾತಿ ಹೊಂದಿದ ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಪ್ರಸ್ತುತ ಹೆಚ್ಚುವರಿ ಪ್ರೌಢ ಶಾಲಾ ಶಿಕ್ಷಕರ ಪಟ್ಟಿಯಲ್ಲಿ ಹೆಚ್ಚುವರಿ ಟಿಜಿಟಿ ಶಿಕ್ಷಕರುಗಳ ಹೆಸರನ್ನು ಸೇರಿಸದೆ ಕೌನ್ಸಿಲಿಂಗ್ ಮಾಡಿರುವುದು ಅನ್ಯಾಯವಾಗಿದೆ. ಕೂಡಲೇ ಈಗ ಮಾಡಿರುವ ಕೌನ್ಸಿಲಿಂಗ್ ರದ್ದು ಮಾಡಿ ಹೊಸದಾಗಿ ಕೌನ್ಸಿಲ್ ಮಾಡಬೇಕು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಅದೇ ರೀತಿಯಲ್ಲಿ ಕಡ್ಡಾಯ ವರ್ಗಾವಣೆ ಪ್ರೌಢ ಶಾಲಾ ಶಿಕ್ಷಕರ ಪಟ್ಟಿಯಲ್ಲಿ ಟಿಜಿಟಿ ಶಿಕ್ಷಕರ ಹೆಸರುಗಳನ್ನು ಸೇರ್ಪಡೆಗೊಳಿಸುವುದು, ಆಸಕ್ತ ಶಿಕ್ಷಕರನ್ನು ಮಾತ್ರ ಹೊರ ಜಿಲ್ಲೆಗಳಿಗೆ ಮರು ಹೊಂದಾಣಿಕೆ ಮಾಡಿ ಉಳಿದವರನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಮರು ಹೊಂದಾಣಿಕೆ ಮಾಡಬೇಕು, ಆರ್'ಎಂಎಸ್'ಎ ಪಬ್ಲಿಕ್ ಸ್ಕೂಲ್'ಗಳಲ್ಲಿರುವ ಪ್ರೌಢಶಾಲಾ ಶಿಕ್ಷಕ ಪಿಸಿಎಂ ಹುದ್ದೆಗಳಿಗೆ, ಇಸಿಒ, ಬಿ.ಆರ್.ಪಿ ಪ್ರಾಥಮಿಕ ಮಾದರಿ ಶಾಲೆಗಳ ಮುಖ್ಯ ಶಿಕ್ಷಕ ಹುದ್ದೆಗಳಿಗೆ ಮರು ಹೊಂದಾಣಿಕೆ ಮಾಡುವ ಮೂಲಕ ಶಿಕ್ಷಕರ ಬೇಡಿಕೆಗಳು ಕಾನೂನಾತ್ಮಕ ಹಾಗೂ ಮಾನವೀಯ ನೆಲೆಯಲ್ಲಿ ನ್ಯಾಯ ಸಮ್ಮತವಾಗಿದ್ದು ಬೇಡಿಕೆಗಳನ್ನು ಪರಿಗಣಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಾಗಿ ಶಾಸಕ ಕಾಮತ್ ಸರಕಾರಕ್ಕೆ ಮನವಿ ಮಾಡಿದ್ದಾರೆ.