ಮಂಗಳೂರು, ಜು 07 (DaijiworldNews/SM): ಅಕ್ರಮವಾಗಿ ಗೋ ಸಾಗಟ ಮಾಡಲಾಗುತ್ತಿದೆ ಎಂದು ಮಾವಿನ ಕಾಯಿ ತುಂಬಿ ಬರುತ್ತಿದ್ದ ವಾಹನ ತಡೆದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ಠಾಣಾ ಪೊಲೀಸರು ಶಂಕಿತ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶಂಕಿತರು ನೀಡಿದ ಮಾಹಿತಿಯ ಮೇರೆಗೆ ತನಿಖೆ ಮುಂದುವರೆಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ರವಿವಾರ ಮುಂಜಾನೆ ಅಕ್ರಮವಾಗಿ ಗೋ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ ತಂಡವೊಂದು ಕುಲಶೇಖರ ಸಿಲ್ವರ್ ಗೇಟ್ ಬಳಿ ವಾಹನದಲ್ಲಿ ಮಾವಿನ ಹಣ್ಣು ಸಾಗಾಟ ನಡೆಸುತ್ತಿದ್ದವರನ್ನು ತಡೆದು ಹಲ್ಲೆ ನಡೆಸಿದೆ. ಹಿಂದೂ ಸಂಘಟನೆ ಕಾರ್ಯಕರ್ತರು ವಾಹನ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದವರು ತಿಳಿಸಿದ್ದಾರೆ.
ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಲ್ಲಿ ಅಶ್ಪಕ್, ಫಾರೂಕ್, ಲತೀಫ್ ಎಂಬವರು ಹಲ್ಲೆಗೊಳಗಾಗಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾವಿನಹಣ್ಣು ಲೋಡ್ ಮಾಡಿದ್ದ ವಾಹನವನ್ನು ಕಂಕನಾಡಿ ನಗರ ಠಾಣೆಗೆ ಕೊಂಡೊಯ್ಯಲಾಗಿದೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.