ಮಂಗಳೂರು, ಜು 07(DaijiworldNews/SM): ಐದು ವರ್ಷ ಮಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರವೇ ಅಧಿಕಾರದಲ್ಲಿದ್ದರೂ ಮಂಗಳೂರಿನ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡದಿರುವುದಕ್ಕೆ ಆ ಪಕ್ಷದ ನಿರ್ಲಕ್ಷ್ಯವೇ ಕಾರಣ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ತುಂಬೆಯಿಂದ ಮಂಗಳೂರು ನಗರಕ್ಕೆ ಬರುವ ಕುಡಿಯುವ ನೀರು, ಪಡೀಲ್ ಮತ್ತು ಬೆಂದೂರ್' ವೆಲ್'ನ ನೀರು ಸಂಗ್ರಹಣಾಗಾರದಲ್ಲಿ ಶೇಖರಣೆಗೊಂಡು ನಂತರ ಅಲ್ಲಿಂದ ಪಂಪ್ ಆಗಿ ವಿವಿದೆಡೆ ಪೂರೈಕೆಯಾಗುತ್ತದೆ. ಆದರೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಅಲ್ಲಿಂದ ನೀರು ಪಂಪ್ ಆಗುವುದಿಲ್ಲ. ಇದರಿಂದ ವಾರ್ಡುಗಳಿಗೆ ನೀರು ಪೂರೈಕೆ ಆಗದೆ ಜನ ಸಮಸ್ಯೆ ಅನುಭವಿಸುತ್ತಾರೆ. ಇದನ್ನು ನೋಡಬೇಕಾಗಿದ್ದದ್ದು ಇತ್ತೀಚಿನ ತನಕ ಪಾಲಿಕೆಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಆಡಳಿತ. ಕಾಂಗ್ರೆಸ್'ನ ಜಿಲ್ಲಾ ಉಸ್ತುವಾರಿ ಸಚಿವರುಗಳು ರಾಜ್ಯ ಸರಕಾರದೊಂದಿಗೆ ಸಂವಹನ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ಹಾಗೆ ಮಾಡದ ಪರಿಣಾಮ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ವಿದ್ಯುತ್ ಸಮಸ್ಯೆಯ ನೆಪವೊಡ್ಡಿ ಮನಪಾಲಿಕೆಯು ಸಮರ್ಪಕವಾಗಿ ನೀರು ಪೂರೈಸಲು ಮನಸ್ಸು ಮಾಡುತ್ತಿಲ್ಲ. ಸದ್ಯ ಮೈತ್ರಿ ಸರಕಾರದ ಎರಡೂ ಪಕ್ಷಗಳು ಸರಕಾರ ಉಳಿಸಲು ಒದ್ದಾಡುತ್ತಿರುವುದರಿಂದ ಅವರಿಗೆ ನಾಗರಿಕರ ತೊಂದರೆ ಕಾಣಿಸುವುದಿಲ್ಲ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಕೇಂದ್ರ ಸರಕಾರ ನೀಡುವ ಅನುದಾನ ಬಳಸಿ ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು. ಆದರೆ ಅದನ್ನೂ ಕೂಡ ಪ್ರಯತ್ನಿಸದೆ ನಿರ್ಲಕ್ಷ್ಯ ವಹಿಸಿರುವುದು ಯಾಕೆ ಎಂದು ಶಾಸಕ ಕಾಮತ್ ಪ್ರಶ್ನಿಸಿದ್ದಾರೆ.