ನವದೆಹಲಿ, ಡಿ 12: ಇಟಲಿಯ ಖಾಸಗಿ ಹೋಟೆಲ್ನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿರಾಟ್ ಕೊಹ್ಲಿ - ಅನುಷ್ಕಾಶರ್ಮಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ಇದೀಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿವಾಹವಾಗಿದ್ದು, ನವಜೀವನವನ್ನು ಆರಂಭಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಮುದ್ದಾದ ಜೋಡಿ ಡಿಸೆಂಬರ್ 21ರಂದು ನವದೆಹಲಿಯಲ್ಲಿ ತಮ್ಮ ಬಂಧು-ಬಳಗದವರಿಗಾಗಿ ಆದ್ಧೂರಿ ರಿಸೆಪ್ಷೆನ್ ಆಯೋಜಿದೆ. ಡಿಸೆಂಬರ್ 26ರಂದು ಮುಂಬೈನಲ್ಲಿ ಚಿತ್ರೋದ್ಯಮದ ಗೆಳೆಯರು, ಕ್ರಿಕೆಟರ್ಗಳಿಗೆ ಔತಣಕೂತ ಹಮ್ಮಿಕೊಂಡಿದ್ದಾರೆ. ಇಟಲಿಯಿಂದ ಬಂದ ಬಳಿಕ ಮುಂಬೈನ ವರ್ಲಿಯಲ್ಲಿರುವ ತಮ್ಮ ನೂತನ ನಿವಾಸದಲ್ಲಿ ವಿರುಷ್ಕಾ ಜೋಡಿ ನವಜೀವನ ಆರಂಭಿಸಲಿದೆ ಎಂದು ತಿಳಿದುಬಂದಿದೆ.
ವಿರಾಟ್ ಮತ್ತು ಅನುಷ್ಕಾ ಟ್ವೀಟ್ ಮಾಡಿದ್ದು, ಈ ಟ್ವೀಟ್ ನಲ್ಲಿ ಮದುವೆ ಬಳಿಕ ನಾವಿಬ್ಬರೂ ನಮ್ಮ ಪ್ರೀತಿಗೆ ಬದ್ಧರಾಗಿದ್ದು, ಕೊನೆಯವರೆಗೂ ಈ ಪ್ರೀತಿಯನ್ನು ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇಂದಿನಿಂದ ನಾವು ಜೀವನ ಪರ್ಯಂತ ಒಂದಾಗಿ ಪ್ರೀತಿಯಿಂದ ಇರುತ್ತೇವೆ. ಹೀಗಾಗಿ ಈ ಸಂತೋಷದ ಸುದ್ದಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಕುಟುಂಬದ ಸದಸ್ಯರು, ಅಭಿಮಾನಿಗಳ ಬೆಂಬಲಿದಿಂದ ಈ ದಿನ ನಮ್ಮ ಪಾಲಿಗೆ ವಿಶೇಷ ದಿನವಾಗಿದೆ. ನಮ್ಮ ಈ ಹೊಸ ಪಯಣಕ್ಕೆ ಶುಭ ಹಾರೈಸಿದ ನಿಮಗೆಲ್ಲ ಧನ್ಯವಾದಗಳು ಎಂದು ಬರೆದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಟ್ವೀಟ್ ಮಾಡಿದ್ದಾರೆ.