ಮಂಗಳೂರು, ಜು08(Daijiworld News/SS): ಮಂಗಳೂರು ಸೇರಿದಂತೆ ಅನೇಕ ಮಹಾನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿರುವುದರಿಂದ ಜನ ಆಂತಕಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ, ಶಾಲಾ ಕಾಲೇಜು ಪರಿಸರದಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟಬೇಕು, ಹೋಮ್ ಸ್ಟೇ, ಬೀಚ್ ರೆಸಾರ್ಟ್ಗಳ ಮೇಲೆ ನಿಗಾ ಇಡಬೇಕು, ಹಾಳಾದ ಸಿಸಿ ಟಿವಿ ದುರಸ್ತಿಪಡಿಸಿ, ದನ ಗಳ್ಳತನದ ಬಗ್ಗೆ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಪೊಲೀಸ್ ಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ ಪೊಲೀಸ್ ಸಭೆಯಲ್ಲಿ ಮಾತನಾಡಿದ ಸಾರ್ವಜನಿಕರು, ದನ ಕಳವು ಪ್ರಕರಣಗಳನ್ನು ತಡೆಯಲು ಸಮರ್ಪಕ ಕ್ರಮ ಕೈಗೊಳ್ಳಬೇಕು. ಪೊಲೀಸರು ಆರೋಪಿಗಳನ್ನು ಹಿಡಿದರೂ ಶಿಕ್ಷೆಯಾಗುವುದು ಅಪರೂಪ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಹೆದ್ದಾರಿ ಸಹಿತ ವಿವಿಧೆಡೆ ಹಾಕಲಾದ ಸಿಸಿಟಿವಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಎನ್ಐಟಿಕೆ ಬಳಿ ಮಧ್ಯರಾತ್ರಿವರೆಗೆ ಗೂಡಂಗಡಿಗಳು ವ್ಯಾಪಾರ ಮಾಡುತ್ತವೆ. ಇದಲ್ಲದೆ ಗೂಡಂಗಡಿಗಳ ಸುತ್ತಮುತ್ತ ಅಮಲು ಪದಾರ್ಥಗಳು ಸಿಗುತ್ತವೆ. ಈ ಬಗ್ಗೆ ವ್ಯಾಪಾರಕ್ಕೆ ಸಮಯ ನಿಗದಿ ಪಡಿಸಬೇಕು. ಮಾತ್ರವಲ್ಲ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಪಣಂಬೂರು ಪೊಲೀಸ್ ಉಪವಿಭಾಗದ ಸಹಾಯಕ ಆಯುಕ್ತ ಶ್ರೀನಿವಾಸ ಗೌಡ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಿಸಿಟಿವಿ ಉಪಕರಣಗಳು ಬಂದಿವೆ. ಸಿಸಿಟಿವಿಗಳು ಹಾಳಾದ ಕಡೆ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ದನ ಕಳವು ಸಂಬಂಧಪಟ್ಟಂತೆ ರೈತರು ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳಬಾರದು. ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಣಂಬೂರು ಠಾಣಾ ವ್ಯಾಪ್ತಿಯ ಗೆಸ್ಟ್ ಹೌಸ್, ಹೋಂಸ್ಟೇ ಮೇಲೆ ನಿಗಾ ಇಡಲಾಗಿದೆ. ಯಾವುದೇ ಅತಿರೇಕದ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.