ಮಂಗಳೂರು, ಜು08(Daijiworld News/SS): ನಗರದ ಹೊರವಲಯದ ಸಸಿಹಿತ್ಲು ಬಳಿ ಭಾನುವಾರ ಸಾಯಂಕಾಲ ಕಡಲಿಗಿಳಿದ ನಾಲ್ವರು ಯುವಕರು ಸಮುದ್ರದ ಅಲೆಗೆ ಸಿಲುಕಿದ್ದು, ಇಬ್ಬರು ಸಮುದ್ರಪಾಲಾಗಿದ್ದರು. ಆದರೆ ಈವರೆಗೂ ಯುವಕರ ಮೃತದೇಹ ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಬಜ್ಪೆ ಸಿದ್ದಾರ್ಥನಗರ ನಿವಾಸಿ ಸುಜಿತ್(32) ಮತ್ತು ಕಾವೂರು ನಿವಾಸಿ ಗುರುಪ್ರಸಾದ್(28) ಸಮುದ್ರಪಾಲಾದವರು. ಸೃಜನ್ ಮತ್ತು ಕಾರ್ತಿಕ್ ಎಂಬುವರನ್ನು ರಕ್ಷಿಸಲಾಗಿದ್ದು, ತೀವ್ರ ಅಸ್ವಸ್ಥಗೊಂಡ ಸೃಜನ್ನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:
ಸಸಿಹಿತ್ಲು ಸಮುದ್ರ ತೀರದ ಅಗ್ಗಿದ ಕಳಿಯದಲ್ಲಿ ನಡೆದ ‘ಗ್ರಾಮದ ಗೌಜಿ’ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಭಾಗಿಯಾಗಲು ವಿವಿಧ ಕಡೆಗಳಿಂದ ಯುವಕರ ತಂಡ ಆಗಮಿಸಿತ್ತು. ಈ ಪೈಕಿ ಬಜ್ಪೆ ಯುವ ಟೈಗರ್ ತಂಡದ 7 ಮಂದಿ ಸಮುದ್ರ ವಿಹಾರಕ್ಕಾಗಿ ಆಗಮಿಸಿದ್ದು, ಅವರಲ್ಲಿ ನಾಲ್ವರು ನೀರಿನಲ್ಲಿ ಆಡಲು ಸಮುದ್ರಕ್ಕೆ ಇಳಿದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಗಾಳಿಯೊಂದಿಗೆ ಬಂದ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿದ ಅವರಲ್ಲಿ ಇಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದರೂ, ಇಬ್ಬರ ರಕ್ಷಣೆ ಸಾಧ್ಯವಾಗಲಿಲ್ಲ.
ಸಮುದ್ರ ದಡಕ್ಕೆ ಬಂದ ಯುವಕರನ್ನು ಕಂಡು ಸಮುದ್ರದ ಪ್ರಕ್ಷುಬ್ಧತೆ ಬಗ್ಗೆ ಸ್ಥಳೀಯರು ಎಚ್ಚರಿಸಿದ್ದಾರೆ. ಆದರೆ ಅವರ ಮಾತು ಕಿವಿಗೆ ಹಾಕಿಕೊಳ್ಳದೆ ಯುವಕರ ತಂಡ ಸಮುದ್ರಕ್ಕೆ ಇಳಿದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.