ಮಂಗಳೂರು, ಜು 08 (DaijiworldNews/SM): ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆ ಮಂಗಳೂರಿನ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಭೇಟಿ ನೀಡಿದ್ದಾರೆ. ಹಾಗೂ ದ.ಕ ಜಿಲ್ಲಾ ಎಸ್ಪಿಯವರೊಂದಿಗೆ ಸಭೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈಗಾಗಲೇ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟ ಪ್ರಕರಣ ದಾಖಲಾಗಿದೆ. ಪ್ರಕರಣದ ವಿಚಾರಣೆ ನಡೆಸಿ ಆರೋಪಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಅಲ್ಲದೆ ಕಠಿಣ ಶಿಕ್ಷೆ ನೀಡಬೇಕೆಂದರು. ಅಲ್ಲದೆ ಜಿಲ್ಲೆಯ ಶಾಲಾ ಕಾಲೇಜು ಪಕ್ಕದ ಎಲ್ಲಾ ಅಂಗಡಿ ತಪಾಸಣೆ ನಡೆಸುವಂತೆ ಆದೇಶ ನೀಡಲಾಗಿದೆ. ಈ ಅಂಗಡಿಗಳಲ್ಲಿ ಯಾವುದೇ ರೀತಿ ಅಮಲು ಪದಾರ್ಥಗಳು ಮಾರಾಟವಾಗದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದರು.
ಈ ಘಟನೆಯಿಂದ ವಿದ್ಯಾರ್ಥಿನಿ ಹಾಗೂ ಆಕೆಯ ಸಹೋದರ ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ.ಈ ಬಗ್ಗೆ ವಿದ್ಯಾರ್ಥಿನಿ, ಸಹೋದರ ಹಾಗೂ ತಾಯಿಗೆ ಕೌನ್ಸಿಲಿಂಗ್ ಮೂಲಕ ಮನಪರಿವರ್ತನೆಗೆ ಸಲಹೆ ನೀಡಲಾಗಿದೆ ಎಂದರು.
ಇನ್ನು ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿಯ ವಿದ್ಯಾಭ್ಯಾಸಕ್ಕೆ ಮಹಿಳಾ ಆಯೋಗ ಕ್ರಮಕೈಗೊಳ್ಳಲಿದೆ. ಈ ಜಿಲ್ಲೆಯಿಂದ ಹೊರತುಪಡಿಸಿ ಬೇರೆ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದರು.