ಕಾಸರಗೋಡು ಡಿ 12: ಬಸ್ಸು ನದಿಗೆ ಬಿದ್ದು ಕ್ಲೀನರ್ ಸೇರಿದಂತೆ ಮೂವರು ಮೃತಪಟ್ಟ ಘಟನೆ ಡಿ. 12 ಬೆಳಿಗ್ಗೆ ತಲಶ್ಯೆರಿ ಪಾನೂರು ನಲ್ಲಿ ನಡೆದಿದೆ. ಮೃತಪಟ್ಟವರನ್ನು ಕೂತುಪರಂಬದ ಪ್ರಜಿತ್ , ಜಿತೇಶ್ , ಹೇಮಲತಾ ಎಂದು ಗುರುತಿಸಲಾಗಿದೆ. ಬಸ್ಸಿನಲ್ಲಿ ಅಧಿಕ ಪ್ರಯಾಣಿಕರಿಲ್ಲದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ. ಗಾಯಗೊಂಡಿರುವ ಚಾಲಕ ದೇವದಾಸ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ತಲಶ್ಯೆರಿಗೆ ಬರುತ್ತಿದ್ದ ಖಾಸಗಿ ಬಸ್ಸು ಪೇರಂಗತ್ತೂರು ಸಮೀಪ ಸೇತುವೆಯ ತಡೆಗೋಡೆಗೆ ಬಡಿದು ನದಿಗೆ ಉರುಳಿ ಬಿದ್ದಿದೆ. ಅಪಘಾತ ನಡೆಯುವ ಸಂದರ್ಭದಲ್ಲಿ ಬಸ್ಸು ಸಿಬ್ಬಂದಿಗಳು ಸೇರಿದಂತೆ ನಾಲ್ವರು ಮಾತ್ರ ಬಸ್ಸಿನಲ್ಲಿದ್ದರು ಎನ್ನಲಾಗಿದೆ. ಬೇರೆ ಯಾರಾದರೂ ಪ್ರಯಾಣಿಕರು ಇದ್ದಾರೆ ಎಂಬ ಬಗ್ಗೆ ನದಿಯಲ್ಲಿ ಶೋಧ ನಡೆಸಲಾಗುತ್ತಿದೆ. ಅಗ್ನಿಶಾಮಕ ದಳ , ಪೊಲೀಸರು , ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿ ನಾಲ್ವರನ್ನು ಮೇಲಕ್ಕೆತ್ತಿದರು. ಬಸ್ಸನ್ನು ಮೇಲಕ್ಕೆತ್ತುವ ಕಾರ್ಯ ಭರದಿಂದ ಸಾಗುತ್ತಿದೆ .ಅಪಘಾತದ ಬಳಿಕ ಈ ದಾರಿಯಾಗಿ ಸಂಚಾರ ಸ್ಥಗಿತಗೊಂಡಿದೆ.