ಮಂಗಳೂರು, ಜು09(Daijiworld News/SS): ಪುತ್ತೂರು ಯುವತಿ ಅತ್ಯಾಚಾರ ವಿಷಯದಲ್ಲಿ ಬಿಜೆಪಿ ಸುಮ್ಮನಿರುವುದು ವಿಪರ್ಯಾಸ. ಭಾರತದಲ್ಲೂ ಅತ್ಯಾಚಾರದ ಆರೋಪಿಗಳಿಗೆ ಸೌದಿ ಮಾದರಿ ಗಲ್ಲು ಶಿಕ್ಷೆ ಜಾರಿಗೊಳಿಸಬೇಕು ಎಂದು ಮಾಜಿ ಶಾಸಕಿ ಟಿ. ಶಕುಂತಳಾ ಶೆಟ್ಟಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸೌದಿ ಅರೇಬಿಯಾ ರಾಷ್ಟ್ರದಲ್ಲಿ ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸುವ, ಗಲ್ಲು ಶಿಕ್ಷೆ ಕೊಡಲಾಗುತ್ತದೆ. ಹಾಗಾಗಿ ಹೆಣ್ಣನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ ಮೊದಲು ಹಲವು ಬಾರಿ ಯೋಚಿಸುತ್ತಾರೆ. ಹೀಗಾಗಿ ಸೌದಿ ಮಾದರಿ ಗಲ್ಲು ಶಿಕ್ಷೆಯನ್ನು ಭಾರತದಲ್ಲೂ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಒಂದು ವೇಳೆ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವ ಸರಕಾರಕ್ಕೆ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇದ್ದರೆ ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ನೀಡುವ ಸೌದಿ ಅರೇಬಿಯಾದ ಕಾನೂನು ಜಾರಿಗೊಳಿಸಲು ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆ. ಇದಕ್ಕೆ ಸಂಸದರಾದ ನಳಿನ್, ಶೋಭಾ ಒತ್ತಡ ತರಲಿ. ಆಗ ಮಾತ್ರ ಯುವತಿಯರ, ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಸುಮಾರು 20 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಮುಸ್ಲಿಂ ಯುವಕನಿಂದ ಸೌಮ್ಯಾ ಭಟ್ ಕೊಲೆ ನಡೆದಾಗ, ಬಿಜೆಪಿ ಪ್ರತಿಭಟನೆ ನಡೆಸಿತ್ತು. ದೇರಳಕಟ್ಟೆ ಸಮೀಪ ಪ್ರೇಯಸಿ ಯುವತಿಗೆ ಚೂರಿಯಿಂದ ಇರಿದ ಘಟನೆ ನಡೆದಾಗ, ಇದಕ್ಕೆ ಸಚಿವ ಯು.ಟಿ. ಖಾದರ್ ಹೊಣೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದರು. ಆದರೆ ಈಗ ದಲಿತ ಯುವತಿ ಅತ್ಯಾಚಾರ ನಡೆದಾಗ ಸುಮ್ಮನಿರುವುದು ವಿಪರ್ಯಾಸ ಎಂದು ಹೇಳಿದರು.