ಉಡುಪಿ, ಜು09(Daijiworld News/SS): ಮಲ್ಪೆಯಿಂದ ಸೇಂಟ್ ಮೇರಿಸ್ ದ್ವೀಪಕ್ಕೆ ಹೋಗಲು, ಬೀಚ್ನಿಂದ 4 ಬೋಟ್ಗಳು ಮತ್ತು ಜೆಟ್ಟಿಯಿಂದ 3 ಬೋಟ್ಗಳಿಗೆ ನೀಡಿರುವ ಅನುಮತಿ ಅವಧಿ ಮುಕ್ತಾಯಗೊಳ್ಳುತ್ತಿದೆ. ಹೀಗಾಗಿ ಹೊಸದಾಗಿ ಟೆಂಡರ್ ಕರೆದು ಅನುಮತಿ ನೀಡುವಂತೆ ಹಾಗೂ ಐಲ್ಯಾಂಡ್ ಪ್ರಯಾಣಕ್ಕೆ ಬೋಟ್ ದರ ನಿಗದಿಪಡಿಸಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪರಿಶೀಲಿಸಿ ಟೆಂಡರ್ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸೇಂಟ್ ಮೇರಿಸ್ ಐಲ್ಯಾಂಡ್ಗೆ ಮಲ್ಪೆ ಬೀಚ್ನಿಂದ ಮತ್ತು ಜೆಟ್ಟಿಯಿಂದ ಪ್ರವಾಸಿಗರನ್ನು ಕರೆದೊಯ್ಯುವ ಬೋಟ್ಗಳ ಪರವಾನಗಿ ಅವಧಿ ಮುಗಿದಿದ್ದು, ಹೊಸ ಟೆಂಡರ್ ಕರೆಯುವಂತೆ ಮಲ್ಪೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ನೀಡಿದ್ದಾರೆ.
ಮಲ್ಪೆ ಬೀಚ್ನಲ್ಲಿ 12 ವಿಶ್ರಾಂತಿ ಹಟ್, ವಾಚ್ಟವರ್ ನಿರ್ಮಾಣ, ಕಡಲ್ಕೊರೆತದಿಂದ ಹಾನಿಯಾದ ಸೇತುವೆ ನಿರ್ಮಾಣ ಮತ್ತು ರಸ್ತೆಗೆ ಇಂಟರ್ಲಾಕ್ ಅಳವಡಿಸುವಂತೆ ಕೆ.ಆರ್.ಐ.ಡಿ.ಎಲ್.ಗೆ ಜಿಲ್ಲಾಧಿಕಾರಿ ಸೂಚಿಸಿದರು. ಇದೇ ವೇಳೆ ಟೆಬ್ಮಾ ಶಿಪ್ ಯಾರ್ಡ್ ಜಾಗದಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸುವಂತೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಶಾಸಕ ರಘುಪತಿ ಭಟ್, ಮಲ್ಪೆ ಬೀಚ್ನಲ್ಲಿ ಅನಾಹುತ ಸಂಭವಿಸಿದರೆ ತುರ್ತು ಚಿಕಿತ್ಸೆ ನೀಡಲು ಮತ್ತು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಅವಶ್ಯ. ಆರೋಗ್ಯ ಇಲಾಖೆ ವತಿಯಿಂದ ಬೀಚ್ನಲ್ಲಿ ತಾತ್ಕಾಲಿಕವಾಗಿ 108 ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಮಾತ್ರವಲ್ಲ, ಪ್ರವಾಸಿಗರು ತಮ್ಮ ಮನೆಯಿಂದ ತರುವ ಆಹಾರ ಪದಾರ್ಥಗಳನ್ನು ನಿಷೇಧಿಸಬಾರದು. ಕೆಲ ಬೋಟ್ನವರು ಪ್ರವಾಸಿಗರಿಗೆ ಸೇಂಟ್ಮೇರಿಸ್ ದ್ವೀಪವನ್ನು ವೀಕ್ಷಿಸಲು 1 ಗಂಟೆ ಕಾಲಮಿತಿ ಹೇರಿರುವ ಕುರಿತು ಪರಿಶೀಲಿಸುವಂತೆ ಶಾಸಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.