ಮಂಗಳೂರು, ಜು 09 (Daijiworld News/MSP): ರದ್ದಾಗಿದ್ದ ಇ- ಟಿಕೆಟ್ ನೊಂದಿಗೆ ಮಂಗಳೂರು ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ ಕೂಳೂರು ನಿವಾಸಿ ಕೆವಿನ್ ವೆರ್ನಾನ್ ಫೆರ್ನಾಂಡಿಸ್ ಎಂಬುವವರನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ದಳ ಸಿಬ್ಬಂದಿ ತಡೆದು ಬಜ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತನ ವಿರುದ್ದ ವಿಮಾನ ನಿಲ್ದಾಣದ ಒಳಗೆ ಅಕ್ರಮ ಪ್ರವೇಶ ಮಾಡಿದ ಆರೋಪ ಹೊರಿಸಲಾಗಿದೆ. ಕೆವಿನ್ ವೆರ್ನಾನ್ ಫೆರ್ನಾಂಡಿಸ್ ಅವರು ಪತ್ನಿಯ ಜತೆ ರಾತ್ರಿ 8.05 ಕ್ಕೆ ಹೊರಡುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ಐ ಎಕ್ಸ್ 813 ವಿಮಾನದ ಇ - ಟಿಕೆಟ್ ಮತ್ತು ಪಾಸ್ ಪೋರ್ಟ್ ತೋರಿಸಿ ಸಂಜೆ 5.25 ಕ್ಕೆ ವಿಮಾನ ನಿಲ್ದಾಣದ ನಿರ್ಗಮನ ಗೇಟ್ ಮೂಲಕ್ ಅಚೆಕ್ ಇನ್ ಏರಿಯಾಕ್ಕೆ ಪ್ರವೇಶಿಸಿದ್ದರು.
6.01 ರ ವೇಳೆಗೆ ಕೆವಿನ್ ನಿರ್ಗಮನ ದ್ವಾರದ ಮೂಲಕ ಹೊರಗೆ ಹೋಗುತ್ತಿದ್ದಾಗ ಅಲ್ಲಿದ್ದ ಸಿಐಎಸ್ ಎಫ್ ಸಿಬ್ಬಂದಿ ತಡೆದು ನಿಲ್ಲಿಸಿದರು. ವಿಚಾರಣೆ ನಡೇಸಿದಾಗ ಕೆವಿನ್ ಪತ್ನಿಯ ಜತೆ ದುಬೈಗೆ ತೆರಳಲು ಇ- ಟಿಕೆಟ್ ಖರೀದಿಸಿದ್ದ . ಬಳಿಕ ಒಂದು ಟಿಕೆಟ್ ರದ್ದುಪಡಿಸಿದ್ದು ಅದು ಆತನ ಬಳಿಯೇ ಇತ್ತು. ಪತ್ನಿಯನ್ನು ಬಿಡುವುದಕ್ಕಾಗಿ ಅವರು ನಿರ್ಗಮನ ದ್ವಾರದ ಮೂಲಕ ಒಳಪ್ರವೇಶಿಸಿದ್ದರು. ಆ ಬಳಿಕ ಎಕ್ಸಿಟ್ ಗೇಟ್ ಬಳಿ ಹಿಂದಕ್ಕೆ ಬರುತ್ತಿರುವಾಗ ಸಿಐಎಸೆಫ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಅನಧಿಕೃತವಾಗಿ ಟರ್ಮಿನಲ್ ಪ್ರವೇಶಿಸುವ ವ್ಯಕ್ತಿಯನ್ನು ಇದೇ ರೀತಿ ವಿಚಾರಣೆಗೆ ಒಳಪಡಿಸುವ ಪರಿಪಾಠವಿದೆ.