ಮತ್ತೆ ಮಂಗಳೂರಿನಲ್ಲಿ ಗುಂಡಿನ ಸದ್ದು - ರೌಡಿ ಶೀಟರ್ ಮೇಲೆ ಪೊಲೀಸರ ಶೂಟೌಟ್
Tue, Jul 09 2019 10:40:54 AM
ಮಂಗಳೂರು,ಜು 09 (Daijiworld News/MSP): ಹಲ್ಲೆ ಹಾಗೂ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾದ ರೌಡಿ ಶೀಟರ್ ಬಂಧನಕ್ಕೆ ತೆರಳಿದಾಗ ಆತ ಪೊಲೀಸರ ಮೇಲೆಯೇ ದಾಳಿ ನಡೆಸಿದ ಘಟನೆ ಜು. 09 ರ ಮಂಗಳವಾರ ನಗರದ ಅಡ್ಯಾರ್ ನಲ್ಲಿ ನಡೆದಿದ್ದು, ಈ ಸಂದರ್ಭ ಪೊಲೀಸರು ಸ್ವಯಂ ರಕ್ಷಣೆಗಾಗಿ ಆರೋಪಿ ಮೇಲೆ ಶೂಟೌಟ್ ನಡೆಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ರೌಡಿ ಶೀಟರ್ ನನ್ನು ಭುವಿತ್ ರಾಜ್ ಎಂದು ಗುರುತಿಸಲಾಗಿದೆ. ಮಾವಿನ ಹಣ್ಣು ಸಾಗಾಟದ ಹಲ್ಲೆ ನಡೆಸಿದ ಪ್ರಕರಣದ ತನಿಖೆ ವೇಳೆ ರೌಡಿ ಶೀಟರ್ ಭುವಿತ್ ರಾಜ್ ಕೈವಾಡವಿರುವುದು ಬಯಲಾಗಿತ್ತು. ಈ ಹಿನ್ನಲೆಯಲ್ಲಿ ಕಂಕನಾಡಿ ಪೊಲೀಸ್ ಇನ್ಸ್ಪೆಕ್ಟರ್ ಆತನನ್ನು ಬಂಧಿಸಲು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದ. ಈ ಹಿನ್ನಲೆಯಲ್ಲಿ ಸ್ವಯಂ ರಕ್ಷಣೆಗೆ ಪೊಲೀಸ್ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇತನ ವಿರುದ್ದ 8 ಪ್ರಕರಣಗಳು ದಾಖಲಾಗಿದೆ.
ಘಟನೆಯ ವಿವರ: ಭಾನುವಾರ ಮುಂಜಾನೆ 4 ಗಂಟೆಗೆ 407 ವಾಹನದಲ್ಲಿ ಮಾವಿನ ಹಣ್ಣು ಸಾಗಿಸುತ್ತಿದ್ದು, ಈ ವೇಳೆ ಗುಂಪುಂದು ವಾಹನವನ್ನು ತಡೆಗಟ್ಟಿ ದನ ಸಾಗಾಟದ ವಾಹನವೆಂದು ಹಲ್ಲೆ ನಡೆಸಿತ್ತು. ವಾಹನದಲ್ಲಿದ್ದವರು ಮಾವಿನ ಹಣ್ಣು ಎಂದು ಹೇಳಿದ್ದರೂ ಯುವಕರು ಮಾತ್ರ ಬೆನ್ನುಬಿಟ್ಟಿರಲಿಲ್ಲ. ಈ ಸಂದರ್ಭ ವಾಹನ ಚಾಲಕ ಸೇರಿದಂತೆ ವಾಹನದಲ್ಲಿದ್ದ ಮತ್ತೊಬ್ಬ ಟೆಂಪೋವನ್ನು ಕುಲಶೇಖರ ಚೌಕಿ ಬಳಿ ನಿಲ್ಲಿಸಿ ಓಡಿ ಹೋಗಿದ್ದು, ಟೆಂಪೋದಲ್ಲಿದ್ದ ಫಾರೂಕ್ ಎಂಬವರಿಗೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಹಲ್ಲೆಯ ಬಳಿಕ ದುಷ್ಕರ್ಮಿಗಳು 407 ಟೆಂಪೋವನ್ನು ಚಾಲನೆ ಮಾಡಿಕೊಂಡು ಕುಲಶೇಖರ ಚೌಕಿಯಿಂದ ಕುಲಶೇಖರ ಚರ್ಚ್ ಸಮೀಪ ಕೊಂಡೊಯ್ದು ನಿಲ್ಲಿಸಿದ್ದರು. ಘಟನೆ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡಗಳ ರಚನೆಯಾಗಿದ್ದು, ಶಂಕಿತ 30 ಹೆಚ್ಚು ಜನರ ವಿಚಾರಣೆ ನಡೆದಿತ್ತು.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಸಂದೀಪ್ ಪಾಟೀಲ್, ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ಹನುಮಂತರಾಯ ಭೇಟಿ ನೀಟಿ ಪರಿಶೀಲನೆ ನಡೆಸಿದ್ದಾರೆ.