ಮಂಗಳೂರು, ಡಿ 12: ಸಾಮರಸ್ಯದ ನಡಿಗೆ ಸೌಹಾರ್ದದೆಡೆಗೆ ಎಂದು ವಿವಿಧ ಜಾತ್ಯಾತೀತ ಪಕ್ಷಗಳು ಸಚಿವ ರಮಾನಾಥ ರೈ ನೇತೃತ್ವದಲ್ಲಿ ಆಯೋಜಿಸಿರುವ ಕಾಲ್ನಡಿಗೆ ಜಾಥಕ್ಕೆ ಫರಂಗಿಪೇಟೆಯಲ್ಲಿ ಡಿಸೆಂಬರ್ 12 ರಂದು ಮಂಗಳವಾರ ಪಾರಿವಾಳ ಆಗಸಕ್ಕೆ ಹಾರಿ ಬಿಡುವ ಮೂಲಕ ನಟ ಪ್ರಕಾಶ್ ರೈ ''ರ್ಯಾಲಿಯನ್ನು ಉದ್ಘಾಟಿಸಿದರು. ಫರಂಗಿಪೇಟೆಯಲ್ಲಿ ಕಾಲ್ನಡಿಗೆ ಜಾಥಕ್ಕೆ ಸಚಿವ ರಮಾನಾಥ ರೈ ಚಾಲನೆ ನೀಡಿ ಜಿಲ್ಲೆಯ ಸಾಮರಸ್ಯಕ್ಕೆ ಕೆಲವರು ಧಕ್ಕೆಯುಂಟು ಮಾಡುತ್ತಿದ್ದಾರೆ, ಶಾಂತಿಯನ್ನು ಕಾಪಾಡುವುದು ನಾವು ಆಯೋಜಿಸಿರುವ ಕಾಲ್ನಡಿಗೆ ಜಾಥದ ಉದ್ದೇಶ. ಪರಂಗಿಪೇಟೆಯಿಂದ ಮಾಣಿಯವರೆಗೆ ಮಾತ್ರವಲ್ಲ, ಜೀವನಪರ್ಯಂತ ಜತೆಯಾಗಿ ನಡೆಯಬೇಕಾಗಿದೆ. ನಾವೆಲ್ಲರೂ ಸಹೋದರರಾಗಿದ್ದು ಸಮಾಜದಲ್ಲಿ ಶಾಂತಿ ಮೂಡಬೇಕಾಗಿದೆ ಎಂದರು. ಯಾವುದೇ ರಾಜಕೀಯ ಪಕ್ಷದ ಬ್ಯಾನರ್ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿಲ್ಲ ಇದು ಎಲ್ಲಾ ಶಾಂತಿ-ಸಹಬಾಳ್ವೆಯಲ್ಲಿ ನಡೆಯುವ ನಾಗರಿಕರಿಗೆ ಮುಕ್ತವಾಗಿದೆ "ಎಂದು ರೈ ಇದೇ ವೇಳೆ ತಿಳಿಸಿದರು.
ಇನ್ನು ರ್ಯಾಲಿಯೂ ಸಂಜೆ ಮಾಣಿಯಲ್ಲಿ ಮುಕ್ತಾಯವಾಗಲಿದ್ದು , ಮತೀಯ ಘರ್ಷಣೆಯಲ್ಲಿ ಹತ್ಯೆಯಾದ ನಾವೂರು ಹರೀಶ್ ಪೂಜಾರಿ ಹೆಸರಿನ ವೇದಿಕೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಕಾಲ್ನಡಿಗೆ ಜಾಥದಲ್ಲಿ ಚಿತ್ರನಟ ಪ್ರಕಾಶ್ ರೈ, ಸಿಪಿಎಂ ರಾಜ್ಯ ಮುಖಂಡ ಶ್ರೀರಾಮರೆಡ್ಡಿ, ಸಿಪಿಐ ರಾಜ್ಯ ಮುಖಂಡ ಡಾ. ಸಿದ್ದನಗೌಡ ಪಾಟೀಲ್ ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ, ಶಾಸಕರಾದ ಐವನ್ ಡಿಸೋಜ, ಶಾಸಕರಾದ ಜೆ ಆರ್ ಲೋಬೋ, ಅಭಯಚಂದ್ರ ಜೈನ್, ವಸಂತ ಬಂಗೇರ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜೆಪ್ಪು, ಸಿಪಿಐ ಮುಖಂಡರಾದ ವಿ. ಕುಕ್ಯಾನ್, ಕರುಣಾಕರ್, ಸುರೇಶ್ ಕುಮಾರ್,ಶೇಖರ್ ಜಾಥದ ನೇತೃತ್ವ ವಹಿಸಿದ್ದಾರೆ. ಫರಂಗಿಪೇಟೆಯಿಂದ ಮಾಣಿಯವರೆಗೆ ನಡೆಯುವ ಕಾಲ್ನಡಿಗೆ ಜಾಥವು ಮಾರಿಪಳ್ಳ, ಬಿ ಸಿ ರೋಡ್ ಕಲ್ಲಡ್ಕ ಮಾರ್ಗವಾಗಿ ಮಾಣಿಯಲ್ಲಿ ಸಮಾರೋಪಗೊಳ್ಳಲಿದೆ.