ವಿಟ್ಲ, ಜು 09 (Daijiworld News/MSP): ಅಪ್ರಾಪ್ತ ಬಾಲಕಿ ಮೇಲೆ ಐವರು ಅತ್ಯಾಚಾರ ನಡೆಸಿದ ಪರಿಣಾಮ ಆಕೆ ಗರ್ಭವತಿಯಾಗಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿಟ್ಲ ಸಮೀಪದ ಮುಡ್ನೂರು ನಿವಾಸಿಯಾಗಿರುವ 17 ವರ್ಷದ ಬಾಲಕಿ ಮೇಲೆ ಈ ಕೃತ್ಯ ನಡೆದಿದೆ. ಈಕೆ ಹತ್ತನೆ ತರಗತಿ ಮುಗಿಸಿ ಮನೆಯಲ್ಲಿದ್ದಳು. ಈ ಸಂದರ್ಭ ಆಕೆಯ ದೊಡ್ಡಮ್ಮನ ಮಗನಾದ ಗಣೇಶ ಎಂಬಾತ ಆಕೆಯ ಬಳಿ ಸಲುಗೆಯಿಂದ ವರ್ತಿಸುತ್ತಿದ್ದು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಪ್ರವಾಸಕ್ಕೆ ಕರೆದೊಯ್ಯುವ ನೆಪದಲ್ಲಿ ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗಿ ಎರಡು ದಿನ ಲಾಡ್ಜ್ ನಲ್ಲಿ ಉಳಿಸಿಕೊಂಡು ಬಾಲಕಿಯ ಇಚ್ಚೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ನಡೆಸಿರುತ್ತಾನೆ.
ಆ ಬಳಿಕ ಅದೇ ಗ್ರಾಮದ ಕೃಷ್ಣಪ್ಪ ಎಂಬಾತನು ಫೆಬ್ರವರಿ ತಿಂಗಳಿನಲ್ಲಿ ಬಾಲಕಿಯ ಮನೆಯ ಇತರೆ ಸದಸ್ಯರು ಇಲ್ಲದಿರುವ ವೇಳೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿರುತ್ತಾನೆ.
ಇನ್ನು ದೂರುದಾರ ಬಾಲಕಿಗೆ ಫೋನ್ ಮೂಲಕ ಪವನ್ ಎಂಬಾತನು ಪರಿಚಯವಾಗಿದ್ದು, ಆಕೆಯ ಮನೆಯ ಇತರೆ ಸದಸ್ಯರು ಊರಿನಲ್ಲಿ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವಕ್ಕೆ ತೆರಳಿದ್ದಾಗ ರಾತ್ರಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ನಡೆಸಿರುತ್ತಾನೆ.
ಮತ್ತೋರ್ವ ಆರೋಪಿ ಧನುಷ್ ಎಂಬ ಆಟೋ ಚಾಲಕನು ಸಂತ್ರಸ್ತೆ ಬಾಲಕಿಯ ಮನೆಯ ಇತರೆ ಸದಸ್ಯರು ಊರಿನಲ್ಲಿ ನಡೆಯುತ್ತಿದ್ದ ಬ್ರಹ್ಮಕಲಶೋತ್ಸಕ್ಕೆ ತೆರಳಿದ್ದಾಗ ರಾತ್ರಿ ಮನೆಗೆ ಬಂದು ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿರುತ್ತಾನೆ.
ಬಾಲಕಿ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಪುನೀತ್ ಎಂಬಾತನು ಮನೆಯ ಇತರೆ ಸದಸ್ಯರು ಇಲ್ಲದಿರುವ ವೇಳೆ ದೈಹಿಕ ಸಂಪರ್ಕ ನಡೆಸುತ್ತಿದ್ದನು ಹಾಗು ದೊಡ್ಡಮ್ಮನ ಮಗನಾದ ಗಣೇಶ್ ಮತ್ತೆ ಇದೇ ವರ್ಷದ ಮಾರ್ಚ್ 9 ರಂದು ಸುಬ್ರಹ್ಮಣ್ಯಕ್ಕೆ ಪೂಜೆ ಮಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಲಾಡ್ಜ್ ನಲ್ಲಿ 2 ದಿನ ತಂಗಿದ್ದು ಆಕೆಯ ಇಚ್ಚೆಗೆ ವಿರುದ್ದ ದೈಹಿಕ ಸಂಪರ್ಕ ಮಾಡಿರುತ್ತಾನೆ.
ಜನವರಿ ನಂತರ ಪಿರ್ಯಾದಿಯ ಆರೋಗ್ಯದಲ್ಲಿ ಏರುಪೇರಾಗಿದ್ದು ಈ ಬಗ್ಗೆ ಗಣೇಶ್, ಕೃಷ್ಣಪ್ಪ, ಪವನ್, ಧನುಷ್ ರವರಿಗೆ ತಿಳಿಸಿದಾಗ ಈ ವಿಷಯವನ್ನು ಯಾರಿಗೂ ಹೇಳಬೇಡ, ಹೇಳಿದರೆ ಕೊಂದು ಬಿಡುತ್ತೇನೆ ಎಂದು ಬೆದರಿಕೆ ಹಾಕಿ ಪೋನ್ ಬ್ಲಾಕ್ ಮಾಡಿರುತ್ತಾರೆ. 6 ತಿಂಗಳ ಗರ್ಭಿಣಿಯಾಗಿರುವ ಸಂತ್ರಸ್ತ ಬಾಲಕಿಯ ದೂರಿನಂತೆ ವಿಟ್ಲ ಪೊಲೀಸ್ ಠಾಣೆ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.