ಮಂಗಳೂರು, ಜು 09 (Daijiworld News/MSP): ಅಕ್ರಮ ಗೋಸಾಗಾಟದ ಸಂಶಯದಲ್ಲಿ ಮಾವಿನ ಹಣ್ಣು ಸಾಗಾಟಗಾರರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ರೌಡಿ ಶೀಟರ್ ಭವಿತ್ ರಾಜ್ ಹಾಗೂ ಇತರರನ್ನು ಪೊಲೀಸರು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ರೌಡಿ ಶೀಟರ್ ಭವಿತ್ ರಾಜ್ ವಿರುದ್ದವೇ ವಿರುದ್ಧ 8 ಪ್ರಕರಣಗಳಿವೆ. ಎರಡನೇ ಆರೋಪಿ ಸಂದೇಶ್ ವಿರುದ್ದ ಎರಡು ಪ್ರಕರಣಗಳಿದ್ದು, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಶೀರ್ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ.
ಮೂರನೇ ಆರೋಪಿ ಶರತ್ ಹಾಗೂ ನಾಲ್ಕನೆ ಆರೋಪಿ ಅಶ್ವತ್ ಆಗಿದ್ದು ಇದರಲ್ಲಿ ಅಶ್ವತ್ ನ ಬೈಕ್ ನ್ನು ಈ ಅಪರಾಧ ಕೃತ್ಯದಲ್ಲಿ ಆರೋಪಿಗಳು ಬಳಕೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಬೈಕನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.
ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಅಡ್ಯಾರ್ ಬಳಿ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಮಂಗಳವಾರ ಕಾಯುತ್ತಿದ್ದರು. ಆರೋಪಿಗಳನ್ನು ಅಡ್ಯಾರ್ ಕಟ್ಟೆ ನೀರುಮಾರ್ಗ ಟರ್ನ್ ರಸ್ತೆ ಸನಿಹ ಆರೋಪಿಗಳ ಕಾರನ್ನು ಪೊಲೀಸರು ಅಡ್ಡಗಟ್ಟಿದರು. ಈ ಸಂದರ್ಭ ಆರೋಪಿ ಭವಿತ್ , ಪೊಲೀಸ್ ಹೆಡ್ ಕಾನ್ಸ್ಸ್ಟೇಬಲ್ ವಿನೋದ್ ಎಂಬವರ ಮೇಲೆ ಏಕಾಏಕಿ ದಾಳಿ ನಡೆಸಿ ಭುಜಕ್ಕೆ ಚೂರಿಯಿಂದ ಚುಚ್ಚಿದ್ದಾನೆ. ಈ ಸಂದರ್ಭ ಆತ್ಮರಕ್ಷಣೆಗಾಗಿ ಕಂಕನಾಡಿ ಇನ್ಸ್ಪೆಕ್ಟರ್ ಅಶೋಕ್ ಅವರು ಭವಿತ್ರಾಜ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಈ ವೇಳೆ ಭವಿತ್ ಜತೆಗಿದ್ದ ಸಂದೇಶ್ ಹಾಗೂ ಸನತ್ ತಪ್ಪಿಸಿಕೊಂಡಿದ್ದಾರೆ. ಘಟನಾ ಸ್ಥಳದಿಂದ ಆರೋಪಿಗಳ ಬಳಿಯಿದ್ದ ಚಾಕು ಹಾಗೂ ಮಚ್ಚು ಒಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.