ಕಾಸರಗೋಡು, ಜು 09 (Daijiworld News/MSP): ಪರವನಡ್ಕ ಮಹಿಳಾ ಮಂದಿರದಲ್ಲಿದ್ದ ಅನಾಥರಾಗಿದ್ದ ನಾಲ್ವರು ಹೆಣ್ಮಕ್ಕಳಿಗೆ ಸೋಮವಾರ ವಿವಾಹ ಸಂಭ್ರಮ . ಇಲ್ಲಿನ 4 ಮಂದಿ ಯುವತಿಯರಿಗೆ ಒಂದೇ ಮುಹೂರ್ತದಲ್ಲಿ ಮಾಂಗಲ್ಯಭಾಗ್ಯ ಒದಗಿರುವುದು ಇದಕ್ಕೆ ಪ್ರಧಾನ ಕಾರಣ. ಈ ಹಿಂದೆಯೂ ಇಲ್ಲಿನ ವಾಸವಾಗಿದ್ದ ಯುವತಿಯರನ್ನು ವಿವಾಹ ಮಾಡಿಕೊಡಲಾಗಿದ್ದರೂ, ಏಕಕಾಲಕ್ಕೆ 4 ಮಂದಿ ಯುವತಿಯರು ವಿವಾಹ ಜೀವನಕ್ಕೆ ಕಾಲಿರಿಸುವುದು ಸಂಸ್ಥೆಯ ಇತಿಹಾಸದಲ್ಲಿ ಇದು ಪ್ರಥಮ.
20 ವರ್ಷ ಪ್ರಾಯದ ಉಷಾ, 21 ವರ್ಷದ ಸಂಧ್ಯಾ, 22 ವಯೋಮಾನದ ಲೀಲಾವತಿ, 23ರ ಹರೆಯದ ದಿವ್ಯಾ ಏಚ್ಚಿತ್ತರ ಹಸೆಮಣೆಯೇರಿದ್ದಾರೆ. ಅನಾಥರಾದ ಹೆಣ್ಣುಮಕ್ಕಳಿಗೆ ಬದುಕು ನೀಡಬೇಕು ಎಂಬ ಸದಾಶಯದಿಂದ ಆಗಮಿಸಿದ್ದ ಯುವಕರು ಇವರೊಂದಿಗೆ ದಾಂಪತ್ಯದ ಬದುಕಿಗೆ ಪಾದಾರ್ಪಣೆ ಮಾಡಿದ್ದಾರೆ. ಕೇರಳದ ವಡಗರ ವಳಯಂ ನಿವಾಸಿ ಎ.ಕೆ.ಜಿಜಿಲೇಷ್ ಉಷಾ ಅವರನ್ನು, ಜಿಲ್ಲೆಯ ಪೆರಿಯ ನಿವಾಸಿ ಕೆ.ಮಣಿಕಂಠನ್ ಲೀಲಾವತಿ ಅವರನ್ನು, ಎರಿಂಞಿಪುಳ ನಿವಾಸಿ ಹರೀಶ್ ಚಂದ್ರನ್ ದಿವ್ಯಾ ಏಚ್ಚಿತ್ತರ ಅವರನ್ನು, ಕೋಳಿಯಡ್ಕನಿವಾಸಿ ಸತೀಶ್ ಕುಮಾರ್ ಸಂಧ್ಯಾ ಅವರನ್ನು ವಿವಾಹವಾಗಿದ್ದಾರೆ.
ಮಹಿಳಾ ಮಂದಿರದಲ್ಲಿ ಹುಡುಗಿ ನೋಡುವ ಮೂಲಕ ಮದುವೆಗೆ ಮನಮಾಡಿದ್ದ ಯುವಕರು ಈ ಸಂಬಂಧ ಮಂದಿರದ ಅಧಿಕಾರಿಗಳಿಗೆಪತ್ರ ಮೂಲಕ ಮನವಿ ಸಲ್ಲಿಸಿದ್ದರು. ಮಹಿಳಾ ಮಂದಿರದ ಅಧಿಕಾರಿಗಳು ಈ ವಿಚಾರವನ್ನು ಕೋಯಿಕೋಡ್ ನಲ್ಲಿರುವ ರೀಜನಲ್ ಅಸಿಸ್ಟೆಂಟ್ ಡೈರೆಕ್ಟರ್ ಅವರಿಗೆ ತಿಳಿಸಿದ್ದರು. ಅಲ್ಲಿಂದ ಸರಕಾರಿ ನೆಲೆಯಿಂದ ನಡೆಸಲಾದ ಅನ್ವೇಷಣೆಯಲ್ಲಿ ಹುಡುಗರ ಗುಣ-ಸ್ವಭಾವ, ಆರೋಗ್ಯ, ಮನೆಯ ವ್ಯವಸ್ಥೆ ಇತ್ಯಾದಿಗಳನ್ನು ತಿಳಿದು ತೃಪ್ತಿಕರ ಫಲಿತಾಂಶವೂ ಲಭಿಸಿತ್ತು.
ವಿವಾಹ ಸಮಾರಂಭ ಸ್ಥಳೀಯ ಪಾಂಚಜನ್ಯ ಸಭಾಂಗಣದಲ್ಲಿ ಜರುಗಿತ್ತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಇತರ ಜನಪ್ರತಿನಿಧಿಗಳ ಸಮಕ್ಷದಲ್ಲಿ ಈ ಮಂಗಳ ಕಾರ್ಯ ನಡೆದಿದೆ. ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಈ ವಿಚಾರ ತಿಳಿದು ಮದುವೆಯ ಹಿಂದಿನ ದಿನ ಮಧುಗಳಿಗೆ ಆಶೀರ್ವಾದ ನೀಡಿದ್ದರು . ಅಂದು ನಡೆದ ಮೆಹಂದಿ ಕಾರ್ಯಕ್ರಮವೂ ಸುಂದರವಾಗಿ ನಡೆದಿತ್ತು.
ವಿವಾಹ ವೆಚ್ಚಕ್ಕಾಗಿ ಸರಕಾರದ ವತಿಯಿಂದ ತಲಾ ಒಂದು ಲಕ್ಷ ರೂ. ಮಂಜೂರುಮಾಡಲಾಗಿತ್ತು. ಚೆಮ್ನಾಡ್ ಕುಟುಂಬಶ್ರೀ ಸಿ.ಡಿ.ಎಸ್. ವತಿಯಿಂದ ವಿವಾಹದ ಉಡುಪು ಮತ್ತು ಕಾಲ್ಗಜ್ಜೆ, ವಾಚು ಉಡುಗೊರೆಯಾಗಿ ನೀಡಲಾಗಿತ್ತು. ಮಧುಗಳ ಅಲಂಕಾರಕ್ಕಾಗಿ ಬ್ಯೂಟೀಷಿಯನ್ ಅವರನ್ನು ಕೂಡಾ ಸಿ.ಡಿ.ಎಸ್. ವ್ಯವಸ್ಥೆ ಮಾಡಿತ್ತು. ಸಮಾಜನೀತಿಇಲಾಖೆ ಮತ್ತು ಮಹಿಳಾ, ಶಿಶು ಅಭಿವೃದ್ಧಿ ಇಲಾಖೆ ಸಿಬ್ಬಂದಿ ಮಂಡಳಿ ವತಿಯಿಂದ ಈ ಹೆಣ್ಣುಮಕ್ಕಳಿಗೆ ಕಿವಿಯೋಲೆ ಮತ್ತು ಉಂಗುರಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಜಿಲ್ಲೆಯ ಕೆಲವು ಸ್ವಯಂಸೇವಾ ಸಂಘಟನೆಗಳು ಮದುವೆಯನ್ನು ವೈಭವವಾಗಿ ನಡೆಸಿಕೊಟ್ಟರು.
ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂಞಿರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷಸಿ.ಎಚ್.ಮಹಮ್ಮದ್ ಕುಂಞಿ ಚಾಯಿಂಡಡಿ, ಚೆಮ್ನಾಡ್ ಗ್ರಾಮಪಂಚಾಯತ್ ಕಲ್ಟ್ರ ಅಬ್ದುಲ್ಖಾದರ್, ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಜಿಲ್ಲಾ ಮಹಿಳಾ ಶಿಸು ಅಭಿವೃದ್ಧಿ ಅಧಿಕಾರಿ ಡೀನಾ ಭರತನ್, ಜಿಲ್ಲಾ ಸಮಾಜ ನೀತಿ ಅಧಿಕಾರಿ ಭಾಸ್ಕರನ್, ಜಿಲ್ಲಾಪ್ರೋಗ್ರಾಂ ಅಧಿಕಾರಿಕವಿತಾ ರಾಣಿ, ಜಿಲ್ಲಾ ಮಹಿಳಾ ಸಂರಕ್ಷಣೆ ಅಧಿಕಾರಿ ಕೆ.ಎಸ್.ಪ್ರಮೀಳಾ, ಮಹಿಳಾ ಮಂದಿರ ವರಿಷ್ಠಾಧಿಕಾರಿ ಎಂ.ಗೀತಾಕುಮಾರಿ, ವಿವಿಧ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಈ ಸುಮುಹೂರ್ತಕ್ಕೆ ಸಾಕ್ಷಿಯಾದರು.