ತುಮಕೂರು, ಡಿ 12: ದೆಹಲಿಯ ನಿರ್ಭಯ ಘಟನೆ ಬಳಿಕ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸೋದಕ್ಕಿಂತ ಕೆ.ಎಸ್.ಆರ್.ಟಿ.ಸಿ ಪ್ರಯಾಣಿಸೋದು ಸೇಫ್ ಅಂತಾರೆ ಒಂದಿಷ್ಟು ಜನ. ಆದರೆ ನಿರ್ಭಯಳ ಮೇಲೆ ದೌರ್ಜನ್ಯ ಮಾಡಿ ಕೊಲೆ ಮಾಡಿದ ಕ್ರೂರ ಮನಸ್ಸುಗಳು ಪ್ರತಿ ಊರಿನಲ್ಲಿಯೂ ಇದೆ ಅನ್ನೋದಕ್ಕೆ ಇತ್ತೀಚಿನ ಘಟನೆಗಳೇ ಸಾಕ್ಷಿ.
ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಕಾಮುಕ ಕಂಡಕ್ಟರ್ ಗೆ ಸಹಪ್ರಯಾಣಿಕರೆಲ್ಲರೂ ಸೇರಿ ಸಖತ್ ಗೂಸಾ ಕೊಟ್ಟಿರುವ ಘಟನೆ ತುಮಕೂರಿನ ಕುಣಿಗಲ್ ನಲ್ಲಿ ನಡೆದಿದೆ. ಹೊಳೆನರಸೀಪುರ ಡಿಪೋ ವ್ಯಾಪ್ತಿಯ ಕಂಡಕ್ಟರ್ ಜವಾಹರ್ ಅಹಮದ್ ಪ್ರಯಾಣಿಕರಿಂದ ಧರ್ಮದೇಟು ತಿಂದ ಕಂಡಕ್ಟರ್. ಹಾಸನದಿಂದ ಬೆಂಗಳೂರಿಗೆ ಹೊರಟ್ಟಿದ್ದ ಬಸ್ಸಿನಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ರೇಖಾ ಎಂಬ ಯುವತಿ ಹಾಸನದಿಂದ ಬಸ್ ಹತ್ತಿದ್ದಾರೆ. ಸೀಟ್ ಇಲ್ಲದೆ ಇದ್ದ ಕಾರಣ ನಿರ್ವಾಹಕನ ಸೀಟ್ ಪಕ್ಕದಲ್ಲಿ ಕುಳಿತಿದ್ದಾರೆ.ಆದರೆ ನಿರ್ವಾಹಕ ವಿಕೃತ ಕೆಲ್ಸಕ್ಕೆ ಕೈ ಹಾಕಿದ್ದಾನೆ. ಬಸ್ಸು ಕುಣಿಗಲ್ ತಲುಪುತ್ತಿದ್ದಂತೆ ಲೈಟ್ ಆಫ್ ಮಾಡಿದ ಕಂಡೆಕ್ಟರ್ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಭಯದಿಂದಾಗಿ ಯುವತಿ ಪ್ರತಿರೋಧ ತೋರಿ ಕಿರುಚಿಕೊಂಡಿದ್ದಾಳೆ. ತಕ್ಷಣ ಸಹಪ್ರಯಾಣಿಕರು ಯುವತಿ ನೆರವಿಗೆ ಬಂದು ಕಾಮುಕ ಕಂಡಕ್ಟರ್ ಗೆ ಥಳಿಸಿದ್ದಾರೆ. ಘಟನೆಯ ಕುರಿತಂತೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜವಾಹರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.