ಪುತ್ತೂರು, ಜು 09 (Daijiworld News/MSP): ಕಲಿಕಾ ಅವಧಿಯಲ್ಲಿ ಕಾಲೇಜು ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸಬಾರದೆಂಬ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಉಪ್ಪಿನಂಗಡಿ ಎಸ್.ಐ ನಂದ ಕುಮಾರ್ ನೇತೃತ್ವದ ತಂಡ ಸೋಮವಾರ ಸ್ಥಳೀಯ ಕಾಲೇಜುಗಳಿಗೆ ದಾಳಿ ನಡೆಸಿ 24 ಮೊಬೈಲ್ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪುತ್ತೂರು ಖಾಸಗಿ ಕಾಲೇಜು ವಿದ್ಯಾರ್ಥಿಗಳ ಮೊಬೈಲ್ ದುರ್ಬಳಕೆ ಅವಾಂತರ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾರ್ಯಾಚರಣೆ ನಡೆಸಲಾಯಿತು. ದಾಳಿ ವೇಳೆ ವಿದ್ಯಾರ್ಥಿ ಗಳು ಅಕ್ರಮವಾಗಿ ತಂದಿರಿಸಿದ್ದ 24 ಮೊಬೈಲ್ಗಳು ಪತ್ತೆಯಾದವು. ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಮುನ್ನ ಅಂಗಡಿಗಳಲ್ಲಿ ಮೊಬೈಲ್ ಇರಿಸುವ ಸುಳಿವು ಪಡೆದುಕೊಂಡ ಪೊಲೀಸರು ಶಂಕಿತ ಅಂಗಡಿಗಳಿಗೂ ದಾಳಿ ನಡೆಸಿ ತಪಾಸಣೆ ನಡೆಸಿದರು. ಇದಕ್ಕೆ ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪೊಲೀಸರಿಗೆ ಸಾಥ್ ನೀಡಿದರು.
ದಾಳಿಯ ಬಳಿಕ ವಿದ್ಯಾರ್ಥಿ ಸಮೂಹಕ್ಕೆ ಅರಿವು ಮೂಡಿಸಿದ ಎಸ್ಐ ನಂದಕುಮಾರ್ ಅವರು, ಮೊಬೈಲ್ ಬಳಕೆಯಿಂದ ಆಗಬಹುದಾದ ಸಂಭಾವ್ಯ ಅಪಾಯ, ಅಶ್ಲೀಲ ದೃಶ್ಯಾವಳಿಗಳ ಪ್ರಸಾರದ ದುಷ್ಪರಿಣಾಮ, ಗಾಂಜಾ ದಂಧೆಕೋರರಿಂದ ಸಂಭವಿಸಬಹುದಾದ ಅಪಾಯ, ಇತ್ಯಾದಿಗಳ ಬಗ್ಗೆ ಮನವರಿಕೆ ಮಾಡು ಸುಂದರ ಭವಿಷ್ಯ ಹಾಳುಮಾಡಬೇಡಿ ಎಂದು ಬುದ್ದಿಮಾತು ಹೇಳಿದರು.
ಈ ಸಂದರ್ಭ ವಶಕ್ಕೆ ಪಡೆದ ಮೊಬೈಲ್ ವಾಪಾಸ್ ಪಡೆದುಕೊಳ್ಳಬೇಕಾದರೆ ಹೆತ್ತವರೊಂದಿಗೆ ಠಾಣೆಗೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಪೊಲೀಸರು ಸೂಚಿಸಿದ್ದರು ಈ ಸಂದರ್ಭ ಕೆಲವು ವಿದ್ಯಾರ್ಥಿಗಳು ಹೆತ್ತವರನ್ನು ಕರೆದುಕೊಂಡು ಬಂದ್ರೆ ಇನ್ನು ಕೆಲವರು ಪೊಲೀಸರನ್ನೇ ಯಾಮಾರಿಸಲು ಹೋಗಿ ಪೇಚಿಗೆ ಸಿಲುಕಿದರು. ಪರಿಚಿತರನ್ನು ಪೋಷಕರೆಂದು ಬಿಂಬಿಸಿದ ಠಾಣೆಗೆ ಕರೆದೊಯ್ಯದ್ದ ವಿದ್ಯಾರ್ಥಿಗಳಿಗೆ ವಾರ್ನಿಂಗ್ ನೀಡಿ ತಂದೆ ಅಥವಾ ತಾಯಿ ಎಂದು ದೃಢೀಕರಿಸುವ ದಾಖಲೆಯೊಂದಿಗೆ ಹೆತ್ತವರು ಕರೆದುಕೊಂಡು ಬರಲು ಸೂಚಿಸಿದರು. ಹೀಗಾಗಿ ಅನಿವಾರ್ಯವಾಗಿ ಯಾಮಾರಿಸಲು ಬಂದ ವಿದ್ಯಾರ್ಥಿಗಳು ಹೆತ್ತವರನ್ನು ಕರೆದುಕೊಂಡು ಬರಬೇಕಾಯಿತು.