ನವದೆಹಲಿ, ಡಿ 12: ಎಲ್ಲ ದೂರದರ್ಶನ ವಾಹಿನಿಗಳಲ್ಲಿ ಹಗಲಿನ ಸಮಯ ಕಾಂಡೋಮ್ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ದೇಶನ ನೀಡಿದೆ.
ಕಾಂಡೋಮ್ ಜಾಹೀರಾತುಗಳನ್ನು ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಮಾತ್ರ ಪ್ರಸಾರ ಮಾಡಲು ಅವಕಾಶ ನೀಡಿದೆ. ಕೆಲವು ಕಾಂಡೋಮ್ ಜಾಹೀರಾತುಗಳು ತೀರಾ ಅಸಭ್ಯವಾಗಿದ್ದು, ಮಕ್ಕಳಿಂದ ಈ ವಿಷಯವನ್ನು ದೂರ ಇಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕಾಂಡೋಮ್ ಜಾಹಿರಾತುಗಳನ್ನು ಕೆಲವೊಂದು ವಾಹಿನಿಗಳು ಪದೇ ಪದೇ ಪ್ರಸಾರ ಮಾಡುತ್ತಿದ್ದು ಈ ಬಗ್ಗೆ ದೂರು ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕ್ರಮ ಕೈಗೊಂಡಿದೆ. ಯಾವುದೇ ವಾಹಿನಿಗಳು ಇಂಥಾ ಜಾಹೀರಾತುಗಳನ್ನು ನಿರಂತರವಾಗಿ ಪ್ರಸಾರ ಮಾಡಿದರೆ ಆ ವಾಹಿನಿಗಳ ವಿರುದ್ಧ ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮ 1994ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.