ಮಂಗಳೂರು ಡಿ : ಸಚಿವ ರಮಾನಾಥ ರೈ ನೇತೃತ್ವದಲ್ಲಿ ಆಯೋಜಿಸಿರುವ ಸಾಮರಸ್ಯದ ನಡಿಗೆ ಒಂದು ಸಂಪೂರ್ಣ ಪ್ಲಾಪ್ ಶೋ ಆಗಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ವ್ಯಂಗ್ಯವಾಡಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಹರಿಕೃಷ್ಟ ಬಂಟ್ವಾಳ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಅವರ ನೇತೃತ್ವದ ಈ ಜಾಥಾಕ್ಕೆ ೫೦೦ ಮಂದಿಯೂ ಸೇರಿಲ್ಲ ಎಂದ ಮೇಲೆ ಇದು ಅವರ ವಿಫಲ ಪ್ರಯತ್ನ. ಇನ್ನು ಈ ನಡಿಗೆ ಕಾರ್ಯಕ್ರಮ ಯಾವುದೇ ರಾಜಕೀಯ ಪಕ್ಷದ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾಗಿಲ್ಲ ಎನ್ನುವುದು ಒಂದು ಸುಳ್ಳು. ಸಚಿವ ರೈ ಅಧಿಕಾರದ ಆಸೆಯಿಂದ ರಾಜಕೀಯ ಪ್ರೇರಿತರಾಗಿ ಹಾಗೂ ಇನ್ನು ಕೆಲವೇ ತಿಂಗಳಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ರೋಡ್ ಶೋ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಕೋಮುಗಲಭೆಗಳಿಗೆ ಮೂಲಕಾರಣ ಕೋಮುಗಲಭೆ ಮತ್ತು ಅಕ್ರಮ ಗೋ ಸಾಗಾಟ ಇದೆಲ್ಲವನ್ನು ತಿಳಿದಿರುವ ರಮಾನಾಥ ರೈ ಸುಮ್ಮನಿದ್ದಾರೆಯೇ ವಿನಾಃ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಮೊದಲು ಸಮಾಜದಲ್ಲಿ ನಡೆಯುತ್ತಿರುವ ಈ ಅಕ್ರಮಗಳನ್ನು ತಡೆಗಟ್ಟಿದರೆ, ಸಾಮರಸ್ಯ ತನ್ನಿಂದತಾನೆ ನೆಲೆಯಾಗುತ್ತದೆ ಎಂದರು.
ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆ ಗಲಭೆಗಳಿಗೆ ರಮಾನಾಥ ರೈ ಕಾರಣಕರ್ತರು, ಅಲ್ಲದೆ ಅಕ್ರಮ ಮರಳುಗಾರಿಕೆಯ ಕಿಂಗ್ ಪಿನ್. ಇವರು ಜನಪ್ರತಿನಿಧಿಯಾಗಿರುವ ತನಕ ಜಿಲ್ಲೆಯಲ್ಲಿ ಸಾಮರಸ್ಯ ನೆಲೆಯಾಗಲು ಸಾದ್ಯವಿಲ್ಲ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.