ಅಹಮದಾಬಾದ್, ಡಿ 12: ಅಹಮದಾಬಾದ್ನಲ್ಲಿ ಇಂದು ನಡೆಯಬೇಕಿದ್ದ ಮೋದಿ ರೋಡ್ ಶೋಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಹೊಸ ಅಸ್ತ್ರ ಪ್ರಯೋಗಿಸಿದ್ದು ಸೀ ಪ್ಲೇನ್ ಮೂಲಕ ಪ್ರಯಾಣಿಸಿದ್ದಾರೆ.
ಗುಜರಾತ್ ವಿಧಾನಸಭೆಗೆ ಚುನಾವಣೆಗೆ ಪ್ರಚಾರ ಕಣ ರಂಗೇರಿದ್ದು, ಇಂದು ಮೋದಿ ರೋಡ್ ಶೋ ನಡೆಯಲಿತ್ತು. ಆದರೆ ಈ ರೊಡ್ಶೋಗೆ ಅನುಮತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪ್ರಚಾರಕ್ಕಾಗಿ ನೂತನ ಅಸ್ತ್ರ ಪ್ರಯೋಗಿಸಿದ್ದು, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸೀ ಪ್ಲೇನ್ ಮೂಲಕ ಪ್ರಯಾಣ ಮಾಡಿದ್ದಾರೆ.
ಸೀ ಪ್ಲೇನ್ ಮೂಲಕ ಸಬರ್ಮತಿ ನದಿಯಿಂದ 180 ಕಿ.ಮೀ ದೂರದಲ್ಲಿರುವ ಧಾರೋಯ್ ಡ್ಯಾಮ್ಗೆ ಮೋದಿ ತೆರಳಿದ್ದಾರೆ. ಈಗಾಗಲೇ ಸಬರ್ ಮತಿ ನದಿಯಿಂದ ವಿಮಾನ ಟೇಕ್ ಆಫ್ ಆಗಿದ್ದು, ಮೋದಿ ಅವರು ಅಂಬಾಜಿ ಮಾತೆ ದೇಗುಲಕ್ಕೆಭೇಟಿ ನೀಡಲಿದ್ದಾರೆ.
ಸೀ ಪ್ಲೇನ್ ಮೂಲಕ ಮತ್ತೆ ಅದೇ ಮಾರ್ಗವಾಗಿ ಅಹಮದಾಬಾದ್ಗೆ ಹಿಂದಿರುಗಲಿದ್ದಾರೆ. ವಿಶೇಷ ಸೀ ಪ್ಲೇನ್ ಪ್ರಧಾನಿ ಮೋದಿಯನ್ನು ಹೊತ್ತು ನದಿಯ ಮೇಲೆ ತೇಲುತ್ತಾ ಸಾಗಿತು. ಈ ಸೀ ಪ್ಲೇನ್ 9 ರಿಂದ 15 ಜನರನ್ನು ಹೊತ್ತೊಯ್ಯಬಹುದಾದ ಸಾಮರ್ಥ್ಯ ಹೊಂದಿದೆ. ಟೇಕ್ ಆಫ್ ಹಾಗೂ ಲ್ಯಾಂಡಿಂಗ್ಗಾಗಿ ಈ ವಿಮಾನಕ್ಕೆ ಕೇವಲ 300 ಮೀಟರ್ನಷ್ಟು ಉದ್ದದ ರನ್ವೇ ಇದ್ದರೆ ಸಾಕು. ಈ ವಿಮಾನದಲ್ಲಿ ಫ್ಲೋಟ್ಗಳು ಇದ್ದು ನೀರಿನ ಮೇಲೆ ಲ್ಯಾಂಡ್ ಆಗಲು ನೆರವಾಗುತ್ತದೆ.