ಉಡುಪಿ, ಜು 10 (DaijiworldNews/SM): ಶಾಲೆಯ ಬದಲಾಗಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸುವುದನ್ನು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತರ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ, ಜಿಲ್ಲೆಯ 54 ಸರಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಪ್ರಾರಂಭವಾಗಿದೆ. ಇದರಿಂದ ಅಂಗನವಾಡಿಗೆ ಬರಬೇಕಿದ್ದ ಮಕ್ಕಳು ಪಬ್ಲಿಕ್ ಶಾಲೆಗಳಲ್ಲಿ ನೋಂದಾಯಿಸಿಕೊಳ್ಳುತ್ತಿದ್ದಾರೆ. ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ 30 ರಿಂದ 3ಕ್ಕೆ ಕುಸಿತವಾಗಿದೆ. ಕಳೆದ 40 ವರ್ಷದಿಂದ ಐಸಿಡಿಎಸ್ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರು ಬೀದಿಪಾಲಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಬೇಡಿಕೆಗಳು:
ಅಂಗನವಾಡಿ ಕೆಂದ್ರದಲ್ಲಿ 1995ರಲ್ಲಿ ಆಯ್ಕೆಯಾದ ಹಾಗೂ ಎಸ್ಎಸ್ಎಲ್ಸಿ ಪಾಸಾದ ಅಂಗನವಾಡಿ ಶಿಕ್ಷಕರಿಗೆ ತರಬೇತಿ ನೀಡಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಕೇಂದ್ರದಲ್ಲಿ ಎಲ್ಲ ಮೂಲಭೂತ ಸೌಕರ್ಯ ನೀಡಬೇಕು. ಮಕ್ಕಳಿಗೆ ಸಮವಸ್ತ್ರ ನೀಡಬೇಕು. ನಿವೃತ್ತಿ ಸೌಲಭ್ಯವನ್ನು ಬದಲಿಸಿ ಐಎಲ್ಸಿ ಆಧಾರಿತ ಪೆನ್ಷನ್ ನೀಡಬೇಕು. ಸೇವಾ ಜೇಷ್ಠ ಆಧಾರದ ಮೇಲೆ ವೇತನ ಜಾರಿ, ಮೇಲ್ವೀಚಾರಕಿಯಾಗಿ ಮುಂಬಡ್ತಿ ಹೊಂದುವ ಹುದ್ದೆಗಳನ್ನು ಸಂಪೂರ್ಣವಾಗಿ ಅಂಗನವಾಡಿ ಕಾರ್ಯಕರ್ತರಿಗೆ ನೀಡಬೇಕು. ಪ್ರಾಥಮಿಕ ಶಾಲೆಗಳ ಪ್ರವೇಶಕ್ಕೂ ಮುನ್ನ ಅಂಗನವಾಡಿ ಕೇಂದ್ರದಿಂದ ಯುಕೆಜಿ ಪೂರೈಸಿದ ಟಿಸಿ ಪಡೆಯುವ ಪದ್ಧತಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.