ಉಡುಪಿ, ಜು 11 (Daijiworld News/MSP): ಇಲ್ಲಿನ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದ್ದ ಒಂಟಿ ವೃದ್ಧೆ ರತ್ನಾವತಿ ಜಿ.ಶೆಟ್ಟಿ (80) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಪಾದಿತ ದಂಪತಿಯನ್ನು ಗೋವಾದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ನಡೆದ ಐದೇ ದಿನದಲ್ಲಿ ಭೇದಿಸಿದ ಉಡುಪಿ ಜಿಲ್ಲಾ ಪೊಲೀಸರು ಆರೋಪಿ ದಂಪತಿಗಳಿಬ್ಬರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಧಾರವಾಡ ನರಗುಂದ ಮೂಲದ ಅಂಬಣ್ಣ ಅಲಿಯಾಸ್ ಅಂಬರೀಶ್ ಅಲಿಯಾಸ್ ಅಂಬಣ್ಣ ಬಸಪ್ಪ ಜಾಡರ್ ಅಲಿಯಾಸ್ ಶಿವ (31) ಮತ್ತು ಆತನ ಪತ್ನಿ ರಶೀದಾ ಅಲಿಯಾಸ್ ಖಾಜಿ ಆಲಿಯಾಸ್ ಜ್ಯೋತಿ (26) ಬಂಧಿತರು. ಆರೋಪಿಗಳು ದುಂದುವೆಚ್ಚ ಮಾಡುತ್ತಿದ್ದು, ಚಿನ್ನಾಭರಣ ಮತ್ತು ಹಣಕ್ಕಾಗಿಯೇ ಕೊಲೆ ನಡೆಸಿರುವುದನ್ನು ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇವರು ರತ್ನಾವತಿ ಶೆಟ್ಟಿ ಧರಿಸಿದ್ದ ಸುಮಾರು 2 ಲ.ರೂ.ಗಳಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದು, ಇದನ್ನು ಇನ್ನಷ್ಟೇ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.
ರತ್ನಾವತಿ ಶೆಟ್ಟಿ ಅವರ ಮನೆಗೆ ಆರೋಪಿಗಳು ಜು.1ರಂದು ಬಾಡಿಗೆ ಮನೆ ಕೇಳಿಕೊಂಡು ಬಂದಿದ್ದು, ಅವರಿಗೆ ರತ್ನಾವತಿ ಅವರು ಬಾಡಿಗೆ ಕೋಣೆ ನೀಡಿದ್ದರು. ಆ ರಾತ್ರಿ ಅಲ್ಲೇ ಕಳೆದ ಅವರು ಈ ಜೋಡಿ ಮಾರನೇದಿನ ಮಧ್ಯಾಹ್ನದ 3.30ರ ವೇಳೆಗೆ ರತ್ನಾವತಿ ಅವರನ್ನು ಮಲಗುವ ಕೋಣೆಯಲ್ಲಿ ಕತ್ತಿಯಿಂದ ಕಡಿದು ಕೊಲೆ ಮಾಡಿ ಚಿನ್ನಾಭರಣ ದೋಚಿ ಕಾಲ್ಕಿತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರತ್ನಾವತಿ ಅವರ ಶವ ಜು.5ರಂದು ರಾತ್ರಿ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಂಧಿತ ಆರೋಪಿಗಳಿಗೆ ಕ್ರಿಮಿನಲ್ ಹಿನ್ನಲೆಯಿದ್ದು, ಮನೆ ಕಳವು, ಸ್ಕೂಟರ್ ಕಳವು , ಸರ ಸುಲಿಗೆ ಮುಂತಾದ ಪ್ರಕರಣದಲ್ಲಿ ಭಾಗಿಯಾಗಿದ್ದರು.
ಎಸ್ಪಿ ನಿಶಾ ಜೇಮ್ಸ್ ನಿರ್ದೇಶನ, ಎಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಸಿಐ ಮಂಜುನಾಥ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಲ್ಪೆ ಠಾಣಾಧಿಕಾರಿ ಮಧು, ಉಡುಪಿ ಎಎಸ್ಐ ಗೋಪಾಲಕೃಷ್ಣ, ಡಿಸಿಐಬಿ ಸಿಬಂದಿ ಪಾಲ್ಗೊಂಡಿದ್ದರು.