ಬಂಟ್ವಾಳ, ಡಿ. 21 (DaijiworldNews/AA): ಪತ್ರಿಕಾ ವಿತರಕರೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಬೈಪಾಸ್ ಬಳಿ ಶನಿವಾರ ಮುಂಜಾನೆ ನಡೆದಿದೆ.

ಬಂಟ್ವಾಳ ಬಡ್ಡಕಟ್ಟೆ - ದೈವಗುಡ್ಡೆ ನಿವಾಸಿ ಪ್ರಶಾಂತ್ ಬಾಳಿಗಾ (54) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.
ಎಂದಿನಂತೆ ಶನಿವಾರ ಬೆಳಿಗ್ಗೆ 4 ಗಂಟೆಗೆ ಮನೆಯಿಂದ ಪೇಪರ್ ಮತ್ತು ಹಾಲನ್ನು ಮನೆ ಮನೆಗೆ ವಿತರಣೆ ಮಾಡಲು ಹೊರಟವರು ಸ್ವಲ್ಪ ಹೊತ್ತು ಕೆಲ ಮನೆಗಳಿಗೆ ಹಾಲು ಮತ್ತು ಪೇಪರ್ ಹಾಕಿದ್ದಾರೆ. ಬೆಳಿಗ್ಗೆ ಸುಮಾರು 5 ಗಂಟೆಯಿಂದ 8 ಗಂಟೆಯ ಅವಧಿಯಲ್ಲಿ ಬೈಪಾಸ್ ನ ಬಾವಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಶಂಕಿಸಲಾಗಿದೆ.
ರಸ್ತೆ ಬದಿಯಲ್ಲಿ ಇವರ ಬೈಕ್ ಅನಾಥವಾಗಿ ನಿಂತಿರುವುದನ್ನು ಸಾರ್ವಜನಿಕರು ಕಂಡು ಅನುಮಾನಗೊಂಡು ಬಾವಿಯಲ್ಲಿ ನೋಡಿದಾಗ ಮೃತದೇಹ ಕಂಡುಬಂದಿದ್ದು ಸ್ಥಳೀಯರು ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಂಟ್ವಾಳ ನಗರ ಪೋಲೀಸ್ ನಿರೀಕ್ಷಕ ಆನಂತಪದ್ಮನಾಭ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ತಾಯಿ, ಪತ್ನಿ, ಐವರು ಸಹೋದರರು, ಇಬ್ಬರು ಸಹೋದರಿಯರು, ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿ ಬಂಧುಗಳನ್ನು ಅಗಲಿದ್ದಾರೆ.