ಶಿರಸಿ , ಡಿ 12 : ಎರಡು ಕೋಮಿನ ಮಧ್ಯೆ ನಡೆದ ಸಂಘರ್ಷದಿಂದ ಕಳೆದ ಐದು ಆರು ದಿನಗಳಿಂದ ಸ್ತಬ್ಧವಾಗಿದ್ದ ಹೊನ್ನಾವರ ಕೋಮುದಳ್ಳುರಿ ಕಿಡಿ ಇಂದು ಶಿರಸಿಗೂ ವ್ಯಾಪಿಸಿದೆ. ಅನುಮಾನಾಸ್ಪದವಾಗಿ ಸಾವಿಗೀಡಾದ ಪರೇಶ್ ಮೇಸ್ತ ಸಾವು ಖಂಡಿಸಿ, ಡಿ 12ರ ಮಂಗಳವಾರ ನಡೆದ ಶಿರಸಿ ಬಂದ್ ಹಿಂಸಾರೂಪ ಪಡೆದಿದೆ. ಪ್ರಾರಂಭದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಬಂದ್ ಬಳಿಕ ನಿಧಾನವಾಗಿ ಹಿಂಸಾರೂಪ ಪಡೆದು, ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು, ಪ್ರತಿಯಾಗಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಹಾಗೂ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಈ ನಡುವೆ ಪರೇಶ್ ಮೇಸ್ತ ಅನುಮಾನಾಸ್ಪದ ಸಾವುವನ್ನು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ವಿಶ್ಚೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಪೊಲೀಸರು ಅನೇಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.