ಕುಂದಾಪುರ ಡಿ 12: ನಿಯಂತ್ರಣ ತಪ್ಪಿದ ಆಲ್ಟೋ ಕಾರು, ಡಿವೈಡರ್ ದಾಟಿ ಎದುರುಗಡೆಯಿಂದ ಬರುತ್ತಿದ್ದ ಇನ್ಸೂಲೇಟರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕೋಟ ಠಾಣಾ ವ್ಯಾಪ್ತಿಯ ಕೋಟ ಮೂರು ಕೈ ಎಂಬಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ. ಮೃತರನ್ನು ಬಾರ್ಕೂರು ಬೆಣ್ಣೆ ಕುದ್ರು ನಿವಾಸಿಗಳಾದ ಗಿರಿಜಾ (52) ಅವಿನಾಶ್(27) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಸಾಲಿಗ್ರಾಮದಿಂದ ಕೋಟ ಸಮೀಪದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬರುತ್ತಿದ್ದ ಬೈಕ್ ತಪ್ಪಿಸಲು ಹೋಗಿ ಕಾರಿನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಕುಂದಾಪುರ ಕಡೆಯಿಂದ ಬರುತ್ತಿದ್ದ ಇನ್ಸೂಲೇಟರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡು, ಕಾರಿನಲ್ಲಿದ್ದ ನಾಲ್ವರು ಗಂಬೀರ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಇದರಲ್ಲಿ ತಾಯಿ ಮತ್ತು ಮಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.