ಕುಂದಾಪುರ, ಜು 11 (Daijiworld News/MSP): ತೋಟದ ಕೆಲಸಕ್ಕೆಂದು ಹೋದ ವ್ಯಕ್ತಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಗಂಗೆಮನೆ ಎಂಬಲ್ಲಿ ನಡೆದಿದೆ. ಗಂಗೆ ಮನೆ ನಿವಾಸಿ ಮಹಾಲಿಂಗ ಮೊಗವೀರ ಎಂಬುವರ ಪುತ್ರ ಯೋಗೇಂದ್ರ (32) ಎಂಬಾತನೇ ಸಾವಿಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಯೋಗೇಂದ್ರ ಬುಧವಾರ ಮಧ್ಯಾಹ್ನ ಊಟ ಮಾಡಿ ತೋಟದ ಕೆಲಸಕ್ಕೆಂದು ಹೋಗಿದ್ದರು ಎನ್ನಲಾಗಿದೆ. ಆದರೆ ರಾತ್ರಿಯಾದರೂ ಮನೆಗೆ ಬಂದಿಲ್ಲದ ಕಾರಣ ಮನೆಯವರು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬುಧವಾರ ಸಿಕ್ಕಾಪಟ್ಟೆ ಮಳೆ ಇದ್ದ ಕಾರಣ ಹುಡುಕಾಟವೂ ಕಷ್ಟವಾಗಿತ್ತು. ಗುರುವಾರ ಬೆಳಿಗ್ಗೆ ತೋಟದಲ್ಲಿ ನಡೆಯುವ ದಾರಿಗೆ ಹಾಕಲಾದ ಸಿಮೆಂಟಿನ ಕಾಲು ಸಂಕದ ಕೆಳಗೆ ಸುಮಾರು ಇಪ್ಪತ್ತು ಅಡಿ ದೂರದಲ್ಲಿ ತೋಡಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮರದ ತುಂಡಿನ ಕೆಳಗೆ ಯೋಗೇಂದ್ರ ಅವರ ದೇಹವು ಪತ್ತೆಯಾಗಿದೆ.
ಯೋಗೇಂದ್ರ ಅವರಿಗೆ ಎರಡೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದು, ಪತ್ನಿ ಹಾಗೂ ತಂದೆ ತಾಯಂದಿರನ್ನು ಅಗಲಿದ್ದಾನೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.