ಮಂಗಳೂರು, ಜು 11 (DaijiworldNews/SM): ಕಾನೂನು ರಕ್ಷಣೆ ಹೆಸರಿನಲ್ಲಿ ಬಡಪಾಯಿ ಶಾಲಾ ಮಕ್ಕಳ ವಾಹನ ಚಾಲಕರ ಮೇಲೆ ಪೊಲೀಸರು ವಿನಾಕಾರಣ ದಾಳಿ ನಡೆಸುತ್ತಿರುವುದನ್ನು ವಿರೋಧಿಸಿ ಆಟೋರಿಕ್ಷಾ ಚಾಲಕರು ಇಂದು ಏಕಾಏಕಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಆದರೆ, ಶುಕ್ರವಾರದಂದು ನಡೆಸಲು ನಿರ್ಧರಿಸಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದ್ದು ಮುಷ್ಕರ ಮುಂದುವರೆಸಲು ನಿರ್ಣಯಿಸಲಾಗಿದೆ.
ವಾಹನಗಳ ಮುಷ್ಕರದಿಂದಾಗಿ ಶಾಲೆಗಳಿಗೆ ಹೋಗಲು ವಾಹನವಿಲ್ಲದೇ ಹಲವು ಮಂದಿ ಪುಟಾಣಿ ವಿದ್ಯಾರ್ಥಿಗಳು, ಪೋಷಕರು ಕಂಗೆಟ್ಟಿದ್ದಾರೆ. ಹಲವು ಶಾಲೆಗಳಿಗೆ ಪೋಷಕರೇ ತಮ್ಮ ಮಕ್ಕಳನ್ನು ಖಾಸಗಿ ವಾಹನಗಳಲ್ಲಿ ಕರೆದುಕೊಂಡು ಹೋದರೆ, ವಾಹನ ಇಲ್ಲದ ಬಡಪಾಯಿ ಜನ ಮಕ್ಕಳನ್ನು ಶಾಲೆಗೆ ಕಳುಹಿಸಿದೇ ಮನೆಯಲ್ಲೇ ಉಳಿಸಿಕೊಂಡರು.
ಗುರುವಾರದಂದು ಕೆಲವು ಶಾಲೆಗಳಲ್ಲಿ ಪುಟಾಣಿ ವಿದ್ಯಾರ್ಥಿಗಳ ಹಾಜರಾತಿಯೂ ಕಡಿಮೆಯಾಗಿತ್ತು ಎಂದು ಶಾಲೆಗಳ ಮುಖ್ಯಸ್ಥರು ತಿಳಿಸಿದ್ದಾರೆ. ತಾವು ಇಂದು ಮುಷ್ಕರ ನಡೆಸುವ ಬಗ್ಗೆ ಆಟೋರಿಕ್ಷಾ ಚಾಲಕರು ಮುಂಚಿತವಾಗಿಯೇ ಪೋಷಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೆಲವು ಪೋಷಕರೇ ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗದ ಆಟೋರಿಕ್ಷಾ ಚಾಲಕರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ಆದರೆ, ಶಾಲಾ ಮಕ್ಕಳನ್ನು ಕೊಂಡೊಯ್ಯುವ ವಾಹನದ ಚಾಲಕರ ಸಂಘ ಮಾತ್ರ ಇದಕ್ಕೆ ಕ್ಯಾರೇ ಅಂದಿಲ್ಲ. ಇನ್ನು ಆಟೋರಿಕ್ಷಾ ಚಾಲಕರು ಶುಕ್ರವಾರದಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ರದ್ದು ಪಡಿಸಿದ್ದು, ಮುಷ್ಕರವನ್ನು ಮುಂದುವರಿಸಲಿದ್ದಾರೆ ಎಂದು ಸಂಘಟನೆ ಸದಸ್ಯರು ದಾಯ್ಜಿವರ್ಲ್ಡ್ ಗೆ ತಿಳಿಸಿದ್ದಾರೆ.