ಕುಂದಾಪುರ, ಡಿ 12: ದೇಶದಲ್ಲಿ ಇವತ್ತು ಬದಲಾವಣೆಯ ಧನಾತ್ಮಕ ಗಾಳಿ ಬೀಸುತ್ತಿದ್ದರೆ ಕರ್ನಾಟಕ ರಾಜ್ಯ ಮಾತ್ರ ಹಿಮ್ಮುಖವಾಗಿ ಹೆಜ್ಜೆಹಾಕುತ್ತಿದೆ. ಸರ್ಕಾರಿ ಇಲಾಖೆಗಳು ಇವತ್ತು ಸಿದ್ದರಾಮಯ್ಯ ಕೃಪಾಪೋಷಿತ ನಾಟಕ ಮಂಡಳಿಯಂತಾಗಿವೆ. ಹೊನ್ನಾವರ ಪರೇಶ ಎನ್ನುವ ಯುವಕನ ಧಾರುಣ ಸಾವು, ಆ ಶವವನ್ನು ನೋಡಿದ ಸಣ್ಣ ಮಗು ಕೂಡಾ ಅದೊಂದು ಕೊಲೆ ಎಂದು ಹೇಳುತ್ತದೆ. ಆದರೆ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಸಹಜ ಸಾವು ನಿರ್ಧಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತೀಯ ಶಕ್ತಿಗಳು ವಿಜೃಂಬಿಸುತ್ತಿದ್ದರೂ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪರೇಶನ ಹತ್ಯೆಯೊಂದಿಗೆ ೨೦ನೇ ಹಿಂದೂಗಳ ಹತ್ಯೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಕಿಡಿ ಕಾರಿದರು. ಭಾರತೀಯ ಜನತಾ ಪಕ್ಷ ಬೈಂದೂರು ಕ್ಷೇತ್ರ ಇದರ ಕಾರ್ಯಾಲಯವನ್ನು ಹೆಮ್ಮಾಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಬೈಂದೂರು ಕ್ಷೇತ್ರ ಕಾರ್ಯಾಲಯದ ಆರಂಭ ಬದಲಾವಣೆಗೆ ದಿಕ್ಸೂಚಿಯಾಗಲಿ ಎಂದು ಹೇಳಿದ ಅವರು, ಗೌರಿ ಲಂಕೇಶ ಹತ್ಯೆ ಇವತ್ತು ಕಾಂಗ್ರೆಸ್, ಕಮ್ಯೂನಿಷ್ಟ್, ವಿಚಾರವಾದಿಗಳ ಕಾಲಿಗೆ ಸುತ್ತಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಹಿಂದೆ ಬಿಜೆಪಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ನೀಡಿತ್ತು. ಆದರೆ ಇವತ್ತು ಕಾಂಗ್ರೆಸ್ ಸರ್ಕಾರ ಭಯದ ವಾತಾವರಣ ನಿರ್ಮಿಸಿದೆ.ರಾಜ್ಯದಲ್ಲಿ ಇವತ್ತು ಯಾರೂ ಸುರಕ್ಷಿತರಲ್ಲ ಎನ್ನುವ ವಾತಾವರಣ ಮೂಡಿದೆ. ನೀರಾವರಿ ಸಚಿವರು ನೀರಾವರಿ ಸಮಸ್ಯೆಗಳನ್ನು ಪರಿಹರಿಸುವ ಬದಲು ಲಿಂಗಾಯುತ ಹಾಗೂ ವೀರಶೈವ ಧರ್ಮಗಳ ನಡುವೆ ಬಿರುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ 18 ವರ್ಷ ಕಾಲ ಕಾಂಗ್ರೆಸ್ ಶಾಸಕರು ಬೈಂದೂರು ಕ್ಷೇತ್ರದಲ್ಲಿ ಶಾಸಕರಾದರೂ ಕೂಡಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅವರಿಂದ ಸಾಧ್ಯವಾಗಿಲ್ಲ. ೫ ನದಿಗಳು ಕ್ಷೇತ್ರದಲ್ಲಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆ ಕ್ಷೇತ್ರದಲ್ಲಿ ಇದೆ. ಬೈಂದೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕಿದ್ದರೆ ಇಲ್ಲಿ ಬಿಜೆಪಿಯ ಪ್ರತಿನಿಧಿ ಗೆದ್ದು ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯದರ್ಶಿ ಸುರೇಶ ನಾಯಕ್, ಯಶಪಾಲ್ ಸುವರ್ಣ, ಜಿ.ಪಂ.ಸದಸ್ಯರಾದ ಶೋಭ ಜಿ.ಪುತ್ರನ್, ಬಾಬು ಹೆಗ್ಡೆ, ಸುರೇಶ ಬಟ್ವಾಡಿ, ಶಂಕರ ಪೂಜಾರಿ ಉಪಸ್ಥಿತರಿದ್ದರು.
ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸುಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.