ಮಂಗಳೂರು, ಜು12(Daijiworld News/SS): ನಗರದ ಹೊರವಲಯದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಜಾಲವನ್ನು ಮಟ್ಟಹಾಕಲು ಅಸಡ್ಡೆ ಹಾಗೂ ಇತರ ವಿಚಾರಗಳಲ್ಲಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರಿಂದ ಅಮಾನತು ಶಿಕ್ಷೆಗೆ ಒಳಗಾಗಿದ್ದ ಸುರತ್ಕಲ್ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಕೆ ಜಿ ರಾಮಕೃಷ್ಣ ಅವರನ್ನು ಮರಳಿ ಕರ್ತವ್ಯಕ್ಕೆ ಸೇರ್ಪಡೆಗೊಳಿಸಲಾಗಿದೆ.
ಸುರತ್ಕಲ್ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಕೆ ಜಿ ರಾಮಕೃಷ್ಣ ಅವರ ವಿರುದ್ಧದ ಶಿಸ್ತು ಕ್ರಮ ಬಾಕಿ ಇರಿಸಿ, ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಕಮಿಷನರ್ ಸೂಚಿಸಿದ್ದಾರೆ. ರಾಮಕೃಷ್ಣ ಅವರು ಜುಲೈ 10ರಂದು ರಾತ್ರಿ ಸುರತ್ಕಲ್ ಠಾಣೆಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ, ದನಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕಮಿಷನರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಸೂಚನೆಯನ್ನು ಗಂಭೀರವಾಗಿ ಪರಿಗಣಿಸದೆ ಕರ್ತವ್ಯಲೋಪವೆಸಗಿದ್ದರು. ಜೊತೆಗೆ ಹಣಕಾಸು ಸಂಸ್ಥೆಯೊಂದು ವಂಚನೆ ಮಾಡಿದ ಆರೋಪದಲ್ಲಿ ಸಾರ್ವಜನಿಕರು ಠಾಣೆಗೆ ದೂರು ನೀಡಲು ಬಂದಾಗ ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಕೇಸು ದಾಖಲಿಸದೆ ದೂರುದಾರರನ್ನು ಹಿಂದಕ್ಕೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಮಿಷನರ್ ಸಂದೀಪ್ ಪಾಟೀಲ್ ಅವರಿಗೆ ದೂರು ಸಲ್ಲಿಸಿದ್ದರು.