ಮಂಗಳೂರು, ಡಿ. 29 (DaijiworldNews/TA): ಕಳೆದ ನಾಲ್ಕು ವರ್ಷಗಳಿಂದಿದ್ದ ಕಂಬಳದ ಅತಿ ವೇಗದ ಓಟದ ದಾಖಲೆ ಈಗ ಪತನವಾಗಿದೆ. ಮಂಗಳೂರು ರಾಮ ಲಕ್ಷ್ಮಣ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಶ್ರೀಕ ಸಂದೀಪ್ ಶೆಟ್ಟಿ ಅವರ ಕೋಣಗಳು ಈ ದಾಖಲೆ ಮುರಿದು ಹೊಸ ಕಂಬಳ ದಾಖಲೆ ಬರೆದಿದೆ.



ಈ ಬಾರಿಯ ಮಂಗಳೂರು ಕಂಬಳದ ಕೊನೆಯ ಸ್ಪರ್ಧೆಯಲ್ಲಿ ಬಡಗಬೆಟ್ಟಿನ ಕಂಬಳಗಳು ಚಿಗರೆಯಂತೆ ಓಡಿದವು. ಕ್ಷಣ ಮಾತ್ರದಲ್ಲಿ ಗುರಿ ತಲುಪಿದ ಕೋಣಗಳು 125 ಮೀಟರ್ ಕರೆಯನ್ನು ಕೇವಲ 10.87 ಸೆಕೆಂಡ್ ಗಳಲ್ಲಿ ತಲುಪಿ ನೂತನ ದಾಖಲೆ ಬರೆದವು. ಅಂದರೆ 100 ಮೀಟರ್ ಓಟವನ್ನು 8.69 ಸೆಕೆಂಡ್ ಗಳಲ್ಲಿ ಓಡಿದವು. 80 ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ ಅವರ ಯಜಮಾನಿಕೆಯಲ್ಲಿ ಗಾಂಧಿ ಮೈದಾನ ಸಂತು ಮತ್ತು ಸುರತ್ಕಲ್ ಪಾಂಚ ಎಂಬ ಎರಡು ಕೋಣಗಳು ಈ ದಾಖಲೆ ಮಾಡಿದೆ.
ಮಾಸ್ತಿಕಟ್ಟೆ ಸ್ವರೂಪ್ ಅವರು ಈ ಕೋಣಗಳನ್ನು ಓಡಿಸಿ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದೇ ಕಂಬಳದ ಸೆಮಿ ಫೈನಲ್ ರೇಸ್ ನಲ್ಲಿ ಇದೇ ಸಂತು ಮತ್ತು ಪಾಂಚ ಕೋಣಗಳು 125 ಮೀಟರನ್ನು 11.06 ಸೆಕೆಂಡ್ ನಲ್ಲಿ ಕ್ರಮಿಸಿ ಈ ಸೀಸನ್ ನ ಅತಿ ವೇಗದ ಓಟ ಎಂಬ ದಾಖಲೆ ಬರೆದಿದ್ದವು. ಆದರೆ ಅದರ ಮುಂದಿನ ಓಟದಲ್ಲೇ ಎಲ್ಲಾ ದಾಖಲೆಗಳನ್ನು ಮೀರಿ ಹೊಸ ಕಂಬಳ ಸಾಧನೆ ಮಾಡಿದರು.
ಈ ಹಿಂದೆ 2021ರ ಕಕ್ಯಪದವು ಕಂಬಳದಲ್ಲಿ ಈ ಹಿಂದಿನ ದಾಖಲೆ ನಿರ್ಮಾಣವಾಗಿತ್ತು. ಆಗ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಅವರ ಕೋಣಗಳು 125 ಮೀಟರ್ ಓಟವನ್ನು 10.95 ಸೆಕೆಂಡ್ ಗಳಲ್ಲಿ (100 ಮೀಟರ್ ಗೆ 8.76 ಸೆ) ಕ್ರಮಿಸಿ ದಾಖಲೆ ಬರೆದಿದ್ದವು. ಮಾಳ ಪುಟ್ಟ ಮತ್ತು ಮಿಜಾರ್ ಅಪ್ಪು ಕೋಣಗಳನ್ನು ಅಂದು ಓಡಿಸಿದ್ದ ಮಿಜಾರು ಶ್ರೀನಿವಾಸ ಗೌಡ ಅವರು ದಾಖಲೆ ಬರೆದಿದ್ದರು. ಈ ದಾಖಲೆ ಇಂದು ಪತನವಾಗಿದೆ.