ಉಡುಪಿ, ಡಿ. 29 (DaijiworldNews/AA): ಓದಿನ ಕಡೆಗೆ ಗಮನ ಹರಿಸುವಂತೆ ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದು, ಹಿರೇಬೆಟ್ಟು ಗ್ರಾಮದ ಬಾಲ್ಕಟ್ಟುವಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಬಾಲ್ಕಟ್ಟು ನಿವಾಸಿ ಸಮನ್ವಿ ಎಂದು ಗುರುತಿಸಲಾಗಿದೆ. ಈಕೆ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಡಿಸೆಂಬರ್ 26ರ ಸಂಜೆ ಸಮನ್ವಿ ಅವರು ಓದಿನ ಬದಲು ಮೊಬೈಲ್ ಫೋನ್ ಬಳಸುತ್ತಿರುವುದನ್ನು ಗಮನಿಸಿದ ಅವರ ತಾಯಿ, ಮುಂಬರುವ ಪರೀಕ್ಷೆಗಳಿಗೆ ಸಿದ್ಧರಾಗುವಂತೆ ತಿಳಿಹೇಳಿದ್ದರು. ಮಗಳ ಭವಿಷ್ಯದ ದೃಷ್ಟಿಯಿಂದ ತಾಯಿ ಪ್ರೀತಿಯಿಂದಲೇ ಬುದ್ಧಿಮಾತು ಹೇಳಿದ್ದರು.
ಆದರೆ, ತಾಯಿಯ ಮಾತಿನಿಂದ ಮನನೊಂದ ಸಮನ್ವಿ, ತನ್ನ ಮನೆಯ ಬೆಡ್ ರೂಂನಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ತಕ್ಷಣವೇ ಗಮನಿಸಿದ ಕುಟುಂಬಸ್ಥರು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮನ್ವಿ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಗಮನಿಸಿ: ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ರೀತಿಯ ಮಾನಸಿಕ ಒತ್ತಡದಲ್ಲಿದ್ದರೆ ದಯವಿಟ್ಟು ತಜ್ಞರ ಸಹಾಯ ಪಡೆಯಿರಿ. ಸಹಾಯಕ್ಕಾಗಿ ಈ ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ: 9152987821.