ಮಂಗಳೂರು, ಡಿ. 29 (DaijiworldNews/AA): ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೃಷ್ಣ ಜೆ. ರಾವ್ ತಂದೆ ಹಾಗೂ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರನ್ನು ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಪಕ್ಷದಿಂದ ಉಚ್ಛಾಟಿಸಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು, ಜಗನ್ನಿವಾಸ ರಾವ್ ಅವರು ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸದ ಕಾರಣ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಜಗನ್ನಿವಾಸ ರಾವ್ ಅವರಿಗೆ ನೋಟಿಸ್ ನೀಡಲಾಗಿತ್ತು. ಪಕ್ಷದ ಚಟುವಟಿಕೆಗಳಿಂದ ದೂರ ಇಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಒಂದು ವೇಳೆ ಡಿಎನ್ಎ ಪರೀಕ್ಷೆಯಲ್ಲಿ ಕೃಷ್ಣ ಜೆ. ರಾವ್ ಮಗುವಿನ ತಂದೆ ಎಂದು ಸಾಬೀತಾದರೆ, ಆ ಯುವತಿಯನ್ನು ತನ್ನ ಮಗ ಮದುವೆಯಾಗುವಂತೆ ಮಾಡುವುದಾಗಿ ಜಗನ್ನಿವಾಸ ರಾವ್ ಪಕ್ಷಕ್ಕೆ ಭರವಸೆ ನೀಡಿದ್ದರು. ಇದೇ ರೀತಿಯ ಭರವಸೆಯನ್ನು ಅವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೂ ನೀಡಿದ್ದರು ಎನ್ನಲಾಗಿದೆ. ಆದರೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಹೀಗಾಗಿ ಪಕ್ಷವು ಅವರನ್ನು ಉಚ್ಛಾಟಿಸುವ ನಿರ್ಧಾರ ಕೈಗೊಂಡಿದೆ.
ಈ ಪ್ರಕರಣವು ಕಾನೂನಾತ್ಮಕವಾಗಿ ಅಂತ್ಯ ಕಾಣುವವರೆಗೆ ಹಾಗೂ ಸಂತ್ರಸ್ತ ಯುವತಿಗೆ ನ್ಯಾಯ ಸಿಗುವವರೆಗೆ ಪಕ್ಷವು ಹೋರಾಟ ಮುಂದುವರಿಸಲಿದೆ ಎಂದು ಅವರು ತಿಳಿಸಿದರು.