ಮಂಗಳೂರು: ಅಬುಧಾಬಿಯ ಖ್ಯಾತ ಕೊಂಕಣಿ ಮುಖಂಡ ಬೆನೆಟ್ ಡಿ'ಮೆಲ್ಲೊ ನಿಧನ
Tue, Dec 30 2025 03:38:05 PM
ಮಂಗಳೂರು, ಡಿ. 30 (DaijiworldNews/AA): ಅಬುಧಾಬಿಯ ಪ್ರಮುಖ ಸಮುದಾಯದ ನಾಯಕ, ಸಮಾಜ ಸೇವಕ ಮತ್ತು ಸಾಂಸ್ಕೃತಿಕ ಪೋಷಕ ಬೆನೆಟ್ ಕ್ಲಾರೆನ್ಸ್ ಜೂಲಿಯನ್ ಡಿ'ಮೆಲ್ಲೊ (65) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಎಸ್ಸಿಎಸ್ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಯುಎಇಯಲ್ಲಿರುವ ಕೊಂಕಣಿ ಸಮುದಾಯದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದ ಡಿ'ಮೆಲ್ಲೊ ಅವರು ಹಲವಾರು ಪ್ರಮುಖ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದರು. ಇತ್ತೀಚೆಗಷ್ಟೇ 30 ವರ್ಷಗಳ ಸೇವೆಯನ್ನು ಪೂರೈಸಿದ 'ಕೊಂಕಣಿ ಸಾಂಸ್ಕೃತಿಕ ಸಂಸ್ಥೆ'ಯ ಮಾಜಿ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಅಲ್ಲದೆ, ಯುಎಇಯ ಪ್ರಮುಖ ಕೊಂಕಣಿ ಸಂಘಟನೆಗಳಲ್ಲಿ ಒಂದಾದ 'ಎಮಿರೇಟ್ಸ್ ಪೆರಡೆಲಾ'ದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಬೆನೆಟ್ ಡಿ'ಮೆಲ್ಲೊ ಅವರು ಅಬುಧಾಬಿಯ ಇಂಡಿಯನ್ ಸ್ಕೂಲ್ನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಶಿಸ್ತುಬದ್ಧ ಜೀವನ, ಬದ್ಧತೆ ಮತ್ತು ಸಂಸ್ಥೆಯ ಮೇಲಿನ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಆಡಳಿತ ಮತ್ತು ನಾಯಕತ್ವದ ಜವಾಬ್ದಾರಿಗಳ ಜೊತೆಗೆ, ಅವರು ಕೊಂಕಣಿ ಸಂಸ್ಕೃತಿಯ ಬಗ್ಗೆ ಅಪಾರ ಒಲವು ಹೊಂದಿದ್ದರು. ಸ್ವತಃ ಪ್ರತಿಭಾವಂತ ನೃತ್ಯಗಾರರಾಗಿದ್ದ ಅವರು ವಿವಿಧ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಗೆದ್ದಿದ್ದರು. ಯುಎಇ ಮತ್ತು ಮಂಗಳೂರಿನ ಅನೇಕ ಕೊಂಕಣಿ ಸಾಂಸ್ಕೃತಿಕ ಸಂಘಟನೆಗಳಿಗೆ ಅವರು ದೊಡ್ಡ ಶಕ್ತಿಯಾಗಿ ಮತ್ತು ಬೆನ್ನೆಲುಬಾಗಿದ್ದರು.
ಮೃತ ಬೆನೆಟ್ ಕ್ಲಾರೆನ್ಸ್ ಜೂಲಿಯನ್ ಡಿ'ಮೆಲ್ಲೊ ಅವರು ಪತ್ನಿ ಪ್ರೆಡಿತಾ ಅವರನ್ನು ಅಗಲಿದ್ದಾರೆ. ಇವರ ನಿಧನದಿಂದ ಕೊಂಕಣಿ ಸಮುದಾಯವು ಒರ್ವ ಉತ್ತಮ ನಾಯಕ, ಸಂಸ್ಕೃತಿಯ ಹರಿಕಾರ ಮತ್ತು ಉದಾತ್ತ ವ್ಯಕ್ತಿಯನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದೆ.
ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಜನವರಿ 1, ಗುರುವಾರದಂದು ಸಂಜೆ 4:15ಕ್ಕೆ ಮಂಗಳೂರಿನ ಬಿಜೈ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ಗೆ ತರಲಾಗುವುದು. ಬಳಿಕ ಸಂಜೆ 5:00 ಗಂಟೆಗೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.