ಬಂಟ್ವಾಳ, ಡಿ. 30 (DaijiworldNews/AA): ಅಸ್ಸಾಂ ರಾಜ್ಯದ ಬೊಂಗ್ಯಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ವಂ. ಫೆಲಿಕ್ಸ್ ಲಿಯೋ ಪಿಂಟೊ (57) ಅವರು ಅನಾರೋಗ್ಯದ ಹಿನ್ನೆಲೆ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.

ಬೊನವೆಂಚರ್ ಪಿಂಟೊ ಮತ್ತು ಆಲಿಸ್ ಪಿಂಟೊ ದಂಪತಿಯ ಪುತ್ರರಾಗಿ ಫೆಬ್ರವರಿ 28, 1968 ರಂದು ಜನಿಸಿದ ಫಾದರ್ ಫೆಲಿಕ್ಸ್ ಅವರು ಬಾಲ್ಯದಿಂದಲೇ ಧಾರ್ಮಿಕತೆ, ಶಿಸ್ತು ಮತ್ತು ಸೇವಾಭಾವವನ್ನು ಬೆಳೆಸಿಕೊಂಡಿದ್ದರು.
ಧಾರ್ಮಿಕ ಸೇವೆಯನ್ನು ಆರಿಸಿಕೊಂಡ ಅವರು, 2003ರ ಮೇ 1 ರಂದು ಗುರುದೀಕ್ಷೆ ಪಡೆದಿದ್ದರು. ಬಳಿಕ ಅಸ್ಸಾಂನ ಬೊಂಗೈಗಾಂವ್ ಧರ್ಮಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಅತ್ಯಂತ ನಿಷ್ಠೆಯಿಂದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಸರಳ ಸ್ವಭಾವ, ಮೃದು ಮಾತು, ಪ್ರೀತಿ ಮತ್ತು ಜನರ ಬಗೆಗಿನ ಕಾಳಜಿಯ ವ್ಯಕ್ತಿಯಾಗಿದ್ದ ಅವರು, ಧರ್ಮೋಪದೇಶ ಸಮಾಜಸೇವೆ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಅನೇಕ ವಿಶ್ವಾಸಿಗಳಿಗೆ ಮಾರ್ಗದರ್ಶಕರಾಗಿದ್ದರು. ಅವರು ಸೇವೆ ಸಲ್ಲಿಸಿದ ಪ್ರತಿಯೊಂದು ಸ್ಥಳದಲ್ಲಿಯೂ ತಮ್ಮ ವಿನಮ್ರತೆ ಹಾಗೂ ಆತ್ಮೀಯತೆಯಿಂದ ಜನರ ಮನಗೆದ್ದಿದ್ದರು.
ಮೃತರು ತಂದೆ ಬೊನವೆಂಚರ್ ಪಿಂಟೊ, ಸಹೋದರ ವಿಕ್ಟರ್ ಪಿಂಟೊ, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.