Karavali
ಮಂಗಳೂರು: ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ; ಹರ್ಷ ವ್ಯಕ್ತಪಡಿಸಿದ ಸಂಸದ ಕ್ಯಾ. ಚೌಟ
- Tue, Dec 30 2025 09:32:42 PM
-
ಮಂಗಳೂರು, ಡಿ. 30 (DaijiworldNews/AA): ಅತ್ಯಂತ ಕಠಿಣ ಹಾಗೂ ಸವಾಲಿನ ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ವಿಭಾಗದ 55 ಕಿ.ಮೀ. ಮಾರ್ಗದ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಈ ಭಾಗದ ಜನರ ದೀರ್ಘಕಾಲದ ರೈಲ್ವೆ ಮೂಲಸೌಕರ್ಯದ ಬೇಡಿಕೆ ಈಡೇರಿಕೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು. ಘಾಟ್ ಮಾರ್ಗದ ವಿದ್ಯುದ್ದೀಕರಣ ಯೋಜನೆಯು ನಮ್ಮ ಭಾಗದ ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ದೊಡ್ಡ ಮಟ್ಟದ ವೇಗ ನೀಡಲಿದ್ದು, ಕರಾವಳಿಗೆ ಸರಕು ಸಾಗಾಣೆ, ಬಂದರು ಕಾರ್ಯಾಚರಣೆ, ಸುಗಮ ರೈಲು ಸಂಚಾರ ಹಾಗೂ ವಾಣಿಜ್ಯ ಚಟುವಟಿಕೆಗಳ ಉತ್ತೇಜನಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದ ವಿದುದ್ದೀಕರಣ ಕಾಮಗಾರಿ ಯೋಜನೆ ಪೂರ್ಣಗೊಂಡ ಬಗ್ಗೆ ಪ್ರಕ್ರಿಯಿಸಿರುವ ಅವರು, ಈ ರೈಲು ಮಾರ್ಗದ ವಿದುದ್ದೀಕರಣ ಕಾರ್ಯ ಪೂರ್ಣಗೊಂಡಿರುವುದರಿಂದ ಬೆಂಗಳೂರು ಹಾಗೂ ಮಂಗಳೂರು ನಡುವಿನ ರೈಲು ಸಂಪರ್ಕ ಜಾಲ ಮಟ್ಟಷ್ಟು ಸುಧಾರಣೆಯಾಗಲಿದ್ದು, ಪ್ರಯಾಣಿಕರ ಸಂಚಾರದ ಜತೆಗೆ ಮಂಗಳೂರಿಗೆ ಸರಕು ಸಾಗಣೆ ಜತೆಗೆ ಬಂದರು ಹಾಗೂ ವ್ಯಾಪಾರ ಚಟುವಟಿಕೆಗಳ ವೃದ್ಧಿಗೂ ಮತ್ತಷ್ಟು ಅನುಕೂಲ ಕಲ್ಪಿಸಲಿದೆ. ಆ ಮೂಲಕ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಅತ್ಯಂತ ಪ್ರಮುಖ ರೈಲ್ವೆ ಮೂಲಸೌಕರ್ಯ ಸುಧಾರಿಸುವ ಬೇಡಿಕೆ ಈಡೇರಿದೆ ಎಂದು ಸಂಸತ ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಹಾಗೂ ಈ ಯೋಜನೆ ಅನುಷ್ಠಾನ ಪ್ರಕ್ರಿಯೆಯಲ್ಲಿ ವಿಶೇಷ ಆಸಕ್ತಿ ವಹಿಸಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮತ್ತು ತಾಂತ್ರಿಕ ಸವಾಲುಗಳ ನಡುವೆಯೂ ಈ ಐತಿಹಾಸಿಕ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಶ್ರಮಿಸಿದ ಎಲ್ಲ ರೈಲ್ವೆ ಅಧಿಕಾರಿ ವರ್ಗಕ್ಕೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ಲ್ಲಿಸುವುದಾಗಿ ಸಂಸದ ಕ್ಯಾ. ಚೌಟ ಅವರು ತಿಳಿಸಿದ್ದಾರೆ.
ಸಂಸದ ಕ್ಯಾ. ಚೌಟರ ಸತತ ಪ್ರಯತ್ನಕ್ಕೆ ಸಿಕ್ಕಿದ ಯಶಸ್ಸು
ಅಧಿಕಾರ ವಹಿಸಿಕೊಂಡ ದಿನದಿಂದಲೂ ಮಂಗಳೂರು-ಬೆಂಗಳೂರು ರೈಲ್ವೆ ಸಂಪರ್ಕ ಜಾಲ ಸುಧಾರಣೆ ಮಾಡುವುದು ಸಂಸದ ಕ್ಯಾ. ಚೌಟರ ಪ್ರಮುಖ ಆದ್ಯತೆಯಾಗಿತ್ತು. ಅದರಂತೆ ಅವರು ಸಚಿವಾಲಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಸಂಸದರಾಗಿ ಆಯ್ಕೆಯಾದ ಬೆನ್ನಲ್ಲೇ ಅಂದರೆ, 2024ರ ಜುಲೈ 10ರಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚೌಟ ಅವರು ಪಡೀಲ್-ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗದ ದ್ವಿಪಥ ಹಾಗೂ ವಿದ್ಯುದ್ದೀಕರಣಗೊಳಿಸುವ ಬೇಡಿಕೆಗಳ ಬಗ್ಗೆ ವಿವರವಾದ ಮನವಿ ಸಲ್ಲಿಸಿದ್ದರು. 2024ರ ಡಿಸೆಂಬರ್ 11ರಂದು ಲೋಕಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯಡಿ ಅವರು, ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಪರ್ಕದ ಸಾಮರ್ಥ್ಯ, ವೇಗ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೋರಿದ್ದರು.ಇದಕ್ಕೆ ಉತ್ತರಿಸಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಮಂಗಳೂರು-ಬೆಂಗಳೂರು ಮಾರ್ಗವು ಪ್ರಯಾಣಿಕರ ಮತ್ತು ಸರಕು ಸಾಗಣೆಯ ದೃಷ್ಟಿಯಿಂದ ವ್ಯೂಹಾತ್ಮಕವಾಗಿ ಅತ್ಯಂತ ಪ್ರಮುಖ ರೈಲ್ವೆ ಜಾಲ. ಭಾರತೀಯ ರೈಲ್ವೆಯ ರಾಷ್ಟ್ರವ್ಯಾಪಿ ವಿದ್ಯುದ್ದೀಕರಣ ಯೋಜನೆಯಡಿ ಈ ಮಾರ್ಗದಲ್ಲಿ ವಿದ್ಯುದ್ದೀಕರಣ, ಸಾಮರ್ಥ್ಯ ವೃದ್ಧಿ ಮತ್ತು ಮೂಲಸೌಕರ್ಯ ಮೇಲ್ದರ್ಜೆಗೇರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಘಾಟ್ ವಿಭಾಗವೂ ಸೇರಿದಂತೆ ಸಮಗ್ರ ಮಾರ್ಗದ ಆಧುನೀಕರಣದ ಪ್ರಯತ್ನಗಳ ಬಗ್ಗೆ ಸಚಿವರು ತಿಳಿಸಿದ್ದರು.
ಇದಾದ ಬಳಿಕ 2024ರ ಡಿ.18ರಂದು ಲೋಕಸಭೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಯಯಡಿ ಸಂಸದರು, ನವ ಮಂಗಳೂರು ಬಂದರಿನಿಂದ ಒಳನಾಡಿಗೆ ಸರಕು ಸಾಗಣೆ ಸಂಪರ್ಕ ಸುಧಾರಿಸಲು ಕೈಗೊಂಡ ಕ್ರಮ ಮತ್ತು ಸರಕು ಸಾಗಣೆಗೆ ಅಡ್ಡಿಯಾಗುತ್ತಿರುವ ಮೂಲಸೌಕರ್ಯದ ಕೊರತೆಗಳ ಬಗ್ಗೆ ಮಾಹಿತಿ ಕೋರಿದ್ದರು. ಇದಕ್ಕೆ ಉತ್ತರಿಸಿದ್ದ ಸಚಿವರು, ವಿದ್ಯುದ್ದೀಕರಣ, ಹಳಿಗಳ ಸಾಮರ್ಥ್ಯ ವೃದ್ಧಿ ಮತ್ತು ಕಾರ್ಯಾಚರಣೆಯ ದಕ್ಷತೆ ಹೆಚ್ಚಿಸುವ ಮೂಲಕ ಬಂದರು ಸಂಪರ್ಕ ಬಲಪಡಿಸಲು ಭಾರತೀಯ ರೈಲ್ವೆ ಮುಂದಾಗಿದೆ ಹಾಗೂ ಮಂಗಳೂರು ಭಾಗದ ಈ ಕಾಮಗಾರಿಗಳನ್ನು ಹಂತ ಹಂತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದರು.
ಬಳಿಕ 2025ರ ಫೆಬ್ರವರಿ-ಮಾರ್ಚ್ನಲ್ಲಿ ನಡೆದ ರೈಲ್ವೆ ಅನುದಾನ ಬೇಡಿಕೆಗಳ ಚರ್ಚೆ ಸಂದರ್ಭದಲ್ಲಿ ಕ್ಯಾ. ಚೌಟ ಅವರು ಮಂಗಳೂರು-ಬೆಂಗಳೂರು ರೈಲು ಮಾರ್ಗದ ಸಾಮರ್ಥ್ಯ ಹೆಚ್ಚಿಸುವಂತೆ ಆಗ್ರಹಿಸಿದ್ದರು. ವಿಶೇಷವಾಗಿ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ಆಧುನೀಕರಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದ ಕ್ಯಾ. ಚೌಟ ಅವರು ಕರಾವಳಿಯ ಆರ್ಥಿಕ ಅಭಿವೃದ್ಧಿಗೂ ಪೂರಕ ಎಂದು ಗಮನಸೆಳೆದಿದ್ದರು. ಇದಾದ ಬಳಿಕ 2025ರ ಮಾರ್ಚ್ 18ರಂದು ಲೋಕಸಭೆಯಲ್ಲಿ ಮಾತನಾಡಿದ್ದ ಸಂಸದರು, ಮಂಗಳೂರು ಭಾಗದ ರೈಲ್ವೆ ಯೋಜನೆಗಳ ಆಡಳಿತಾತ್ಮಕ ದಕ್ಷತೆ ಮತ್ತು ಸಮನ್ವಯತೆಯ ಅಗತ್ಯತೆಯನ್ನು ಮನವರಿಕೆ ಮಾಡಿದ್ದರು.
2025ರ ಆಗಸ್ಟ್ನಲ್ಲಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಕರಾವಳಿ ಭಾಗದ ರೈಲು ಬೇಡಿಕೆಗಳ ಬಗ್ಗೆ ಪುನರುಚ್ಚರಿಸಿದ್ದರು. ಮಂಗಳೂರು-ಬೆಂಗಳೂರು ಕಾರಿಡಾರ್ನ ವ್ಯೂಹಾತ್ಮಕ ಮಹತ್ವವನ್ನು ಒತ್ತಿಹೇಳಿದ ಅವರು, ಪ್ರಯಾಣಿಕರ ಸೇವೆ ಮತ್ತು ಸರಕು ಸಾಗಣೆ ಎರಡನ್ನೂ ಸುಧಾರಿಸಲು ಘಾಟ್ ವಿಭಾಗದ ವಿದ್ಯುದ್ದೀಕರಣ ಸೇರಿದಂತೆ ಬಾಕಿ ಇರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸುವ ಅನಿವಾರ್ಯತೆಯನ್ನು ಗಮನಕ್ಕೆ ತಂದಿದ್ದರು. ಇದೀಗ ಸಂಸದ ಕ್ಯಾ.ಚೌಟರ ಅವಿರತ ಪರಿಶ್ರಮದ ಫಲ ಹಾಗೂ ನಿರಂತರ ಫಾಲೋಅಪ್ನಿಂದಾಗಿ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆವರೆಗಿನ 55 ಕಿಮೀ. ರೈಲು ಮಾರ್ಗ ವಿದ್ಯುದ್ದೀಕರಣಗೊಂಡಿದೆ.
Met our Union Minister for Railways Shri @AshwiniVaishnaw at his office in Parliament today.
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) August 6, 2025
Discussed key rail-infra projects of our region including Hassan-Mangalore Railway Line Electrification - post which we look to forward to a Mangalore-Bangalore Vande Bharat sleeper… pic.twitter.com/ETt8UAYRnb