ಮಂಗಳೂರು, ಡಿ. 31 (DaijiworldNews/AA): ಹೊಸ ವರ್ಷವನ್ನು ಸ್ವಾಗತಿಸಲು ಜಿಲ್ಲೆಯು ಸಜ್ಜಾಗುತ್ತಿದ್ದು, ಅಪಾರ ಸಂಖ್ಯೆಯ ಪ್ರವಾಸಿಗರು ಕರಾವಳಿ ಭಾಗಕ್ಕೆ ಆಗಮಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಆಚರಣೆಗಳು ಸುಗಮವಾಗಿ ನಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ ಮತ್ತು ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ.

ಜಿಲ್ಲೆಯಾದ್ಯಂತ ಹಲವಾರು ಬೀಚ್ ರೆಸಾರ್ಟ್ಗಳು, ಹೋಂಸ್ಟೇಗಳು, ಹೋಟೆಲ್ಗಳು ಮತ್ತು ಲಾಡ್ಜ್ಗಳು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಬುಕ್ ಆಗಿವೆ. ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ವಿದೇಶಗಳು, ಇತರ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದು, ಹೊಸ ವರ್ಷದ ಆಚರಣೆಯ ನಂತರವಷ್ಟೇ ಅವರು ಹಿಂತಿರುಗುವ ನಿರೀಕ್ಷೆಯಿದೆ. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಕಂಡುಬಂದಿದೆ.
ಡಿಸೆಂಬರ್ 31ರ ಮಧ್ಯಾಹ್ನದಿಂದಲೇ ವಿವಿಧ ಸ್ಥಳಗಳಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರಲಾಗುವುದು. ಪೊಲೀಸ್ ಅಧಿಕಾರಿಗಳೊಂದಿಗೆ ಕೆಎಸ್ಆರ್ಪಿ, ಸಿಎಆರ್ ಮತ್ತು ಡಿಎಆರ್ ಸಿಬ್ಬಂದಿಯನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗುವುದು. ಹೆಚ್ಚುವರಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ವಿಶೇಷ ತಪಾಸಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಮಾರ್ಗಸೂಚಿಗಳು:
ಪೊಲೀಸ್ ಆಯುಕ್ತರ ಕಚೇರಿಯಿಂದ ಪೂರ್ವಾನುಮತಿ ಪಡೆದ ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕ್ಲಬ್ಗಳು ಮತ್ತು ರೆಸಾರ್ಟ್ಗಳಲ್ಲಿ ಮಾತ್ರ ಹೊಸ ವರ್ಷದ ಆಚರಣೆಗೆ ಅವಕಾಶವಿದೆ. ಅನುಮತಿಯಿಲ್ಲದೆ ಸಾರ್ವಜನಿಕವಾಗಿ ಜನರನ್ನು ಸೇರಿಸುವುದು ಅಥವಾ ಕಾರ್ಯಕ್ರಮ ಮಾಡುವುದು ನಿಷೇಧಿಸಲಾಗಿದೆ.
ಹೊಸ ವರ್ಷದ ಕಾರ್ಯಕ್ರಮಗಳು ರಾತ್ರಿ 12.30ರ ಒಳಗೆ ಮುಕ್ತಾಯಗೊಳ್ಳಬೇಕು.
ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಹಾಗೂ ಧ್ವನಿವರ್ಧಕಗಳ ಬಳಕೆಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ. ಮಕ್ಕಳು, ಹಿರಿಯ ನಾಗರಿಕರು ಮತ್ತು ರೋಗಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಸಂಭ್ರಮಾಚರಣೆಯ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ, ಹಿಂಸೆ ಅಥವಾ ಅಶ್ಲೀಲ ಚಟುವಟಿಕೆಗಳನ್ನು ತಡೆಯಲು ವಿಶೇಷ ಕಾರ್ಯಪಡೆಗಳನ್ನು ನಿಯೋಜಿಸಲಾಗಿದೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ನಿಗಾ ಇಡಲು 'ಕ್ವಿಕ್ ರೆಸ್ಪಾನ್ಸ್' ತಂಡಗಳನ್ನು ರಚಿಸಲಾಗಿದೆ. ಅಂತಹವರ ವಿರುದ್ಧ ವಾಹನ ವಶಪಡಿಸಿಕೊಳ್ಳುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
ಡ್ರಗ್ಸ್ ಮಾರಾಟ, ಸಾಗಾಟ ಮತ್ತು ಬಳಕೆಯ ಮೇಲೆ ತೀವ್ರ ನಿಗಾ ಇಡಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುವುದು ಮತ್ತು ಮಾದಕ ದ್ರವ್ಯ ಸೇವನೆ ಪತ್ತೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯಿಂದ ಪ್ರತ್ಯೇಕ ಅನುಮತಿ ಅಗತ್ಯವಾಗಿದೆ.
ಕಾರ್ಯಕ್ರಮದ ಆಯೋಜಕರು ಅಗ್ನಿಶಾಮಕ ಸುರಕ್ಷತಾ ಉಪಕರಣಗಳು, ತುರ್ತು ವೈದ್ಯಕೀಯ ಸೇವೆ ಮತ್ತು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಸಾರ್ವಜನಿಕ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.