ಕಾರ್ಕಳ, ಡಿ. 31 (DaijiworldNews/AA): ಮಲಮಿಶ್ರಿತ ತ್ಯಾಜ್ಯ ನೀರು ಸಾರ್ವಜನಿಕ ರಸ್ತೆಯಲ್ಲಿ ಹರಿಯುತ್ತಿದ್ದರೂ, 50 ಮೀಟರ್ ಅಂತರದಲ್ಲಿರುವ ನಲ್ಲೂರು ಗ್ರಾಮಪಂಚಾಯತ್ ಆಡಳಿತ ವರ್ಗವು ಕಣ್ಣಿದ್ದು ಕುರುಡತನ ಪ್ರದರ್ಶಿಸುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಬಜಗೋಳಿಯಿಂದ ಹೊಸ್ಮಾರು ಕಡೆಗೆ ಹೋಗುವಾಗ ಬಲಭಾಗದಲ್ಲಿ ನಲ್ಲೂರು ಗ್ರಾಮ ಪಂಚಾಯತ್ ಕಚೇರಿ ಕಾಣಸಿಗುತ್ತದೆ. ಇಲ್ಲಿಂದ ಸುಮಾರು 50 ಮೀಟರ್ ದೂರದಲ್ಲಿ ಈ ಸಮಸ್ಯೆ ಎದುರಾಗಿದೆ.
ವಾಣಿಜ್ಯ ಸಂಕೀರ್ಣವೆಂದು ಸ್ಥಳೀಯಾಡಳಿತವು ಆರಂಭದಲ್ಲಿ ಈ ಸಂಕೀರ್ಣಕ್ಕೆ ಪರವಾನಿಗೆ ನೀಡಿದೆ. ನಾನಾ ಕಾರಣಗಳಿಂದ ಪ್ರಸಕ್ತ ದಿನಗಳಲ್ಲಿ ಒಂದಷ್ಟು ಪರಿವರ್ತನೆಯೊಂದಿಗೆ ಜನವಸತಿ ಕೇಂದ್ರವನ್ನಾಗಿ ಮಾರ್ಪಡು ಮಾಡಿರುವ ಅಂಶ ಬಯಲಾಗಿದೆ.
ಈ ಬೆಳವಣಿಗೆಯ ಬಳಿಕ ಸುಮಾರು 30 ರಷ್ಟು ಮಂದಿ ಇದೇ ಕಟ್ಟಡದಲ್ಲಿ ವಾಸವಾಗಿದ್ದಾರೆ. ಅವರೆಲ್ಲರೂ ಉತ್ತರ ಭಾರತದ ಕಾರ್ಮಿಕರಾಗಿದ್ದು, ಸೆಲ್ಯೂನ್, ಹೋಟೆಲ್ ಸಹಿತ ಇತರ ರಂಗಗಳಲ್ಲಿ ದುಡಿಯುತ್ತಿದ್ದಾರೆ. ಇವರೆಲ್ಲರೂ ಇಲ್ಲಿ ತಂಗಿದ್ದ ಬಳಿಕ ಸ್ಥಳೀಯವಾಗಿ ನಾನಾ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ವಾಣಿಜ್ಯ ಸಂಕೀರ್ಣಕ್ಕೆಂದು ಕಿರಿದಾದ ತ್ಯಾಜ್ಯ ಗುಂಡಿಯು ಈ ಕಟ್ಟಡದ ಸನಿಹದಲ್ಲಿದೆ. ತ್ಯಾಜ್ಯ ಪಿಟ್ ಸಾರ್ವಜನಿಕ ರಸ್ತೆ ಸನಿಹದಲ್ಲಿ ರಚಿಸಲಾಗಿದೆ. ಪರಿಣಾಮ ಕಳೆದ ಕೆಲ ತಿಂಗಳುಗಳಿಂದ ಮಳೆಗಾಲ ಕಡಿಮೆಯಾಗುತ್ತಿದ್ದಂತೆ ದುರ್ವಾಸನೆ ಬರುತ್ತಿದೆ.
ಸುಮಾರು 30 ಮಂದಿಯ ಮಲ, ಮೂತ್ರ, ಸ್ನಾನದ ನೀರು, ಆಹಾರ ಸಿದ್ಧಪಡಿಸಿ ನಂತರದಲ್ಲಿ ಶೇಖರಣೆಗೊಂಡ ಹಾಗೂ ಹೋಟೆಲ್ ತ್ಯಾಜ್ಯವು ಇದೇ ತ್ಯಾಜ್ಯ ಗುಂಡಿಯ ಪಿಟ್ ಮೂಲಕವಾಗಿ ತೆರೆದ ಜಾಗದಲ್ಲಿ ಹರಿಯುತ್ತಾ, ಎದುರುಗಡೆ ಹಾದು ಹೋಗಿರುವ ಲೋಕೋಪಯೋಗಿ ಇಲಾಖೆಯ ಅಧೀನಕ್ಕೊಳಪಟ್ಟ ರಸ್ತೆ ಮಾರ್ಜಿನ್ ಗೆ ಲೀನವಾಗುತ್ತಿದೆ. ಅದೇ ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ.
ಸ್ಥಳೀಯ ಗ್ರಾಮಸ್ಥರ ದೂರಿಗೆ ಕವಡೆ ಕಾಸಿನ ಬೆಲೆ ಇಲ್ಲ!
ನಲ್ಲೂರು ಗ್ರಾಮ ಪಂಚಾಯತ್ ಆರ್ಥಿಕ ಕ್ರೋಡಿಕರಣದಲ್ಲಿ ಈ ವಿವಾದಿತ ಕಟ್ಟಡ ಅಥವಾ ಸಂಕೀರ್ಣವೂ ಸೇರಿದೆ. ಕಳೆದ ಒಂದು ವಾರದ ಹಿಂದೆ ಸ್ಥಳೀಯ ಗ್ರಾಮಸ್ಥರು ಈ ಕುರಿತು ನಲ್ಲೂರು ಗ್ರಾಮ ಪಂಚಾಯತ್ ಆಡಳಿತ ವರ್ಗಕ್ಕೆ ದೂರು ನೀಡಿದರೆ, ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ನೀಡುವಲ್ಲಿ ನಲ್ಲೂರು ಗ್ರಾಮ ಪಂಚಾಯತ್ ಮುಂದಾಗಿಲ್ಲ.
ನಲ್ಲೂರು ಗ್ರಾಮ ಪಂಚಾಯತ್ ನಿಂದ 50 ಮೀಟರ್ ದೂರದಲ್ಲಿ ಸಮಸ್ಯೆ ತಾಣ ಕಾಣಬಹುದಾಗಿದೆ. ಆಡಳಿತ ವರ್ಗದವರು, ಜನಪ್ರತಿನಿಧಿಗಳು ಇದೇ ಪರಿಸರದಲ್ಲಿ ದಿನನಿತ್ಯ ಓಡಾಡುತ್ತಿದ್ದರೂ, ಕ್ಯಾರೇ ಅನ್ನದೇ ಕುರುಡುತನ ಪ್ರದರ್ಶಿಸುತ್ತಿವುದು ಯಾಕೆ ಎಂಬುವುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕು
ಕಳೆದ ಕೆಲ ವರ್ಷಗಳ ಹಿಂದೆ ಬಜಗೋಳಿ ಪೇಟೆಯಲ್ಲಿ ಕಾರ್ಯಚರಿಸುತ್ತಿದ್ದ ಹೋಟೆಲ್ ಗಳ ತ್ಯಾಜ್ಯ ನೀರು ನಲ್ಲೂರು ಗ್ರಾಮ ಪಂಚಾಯತ್ ಗೆ ಹರಿಬಿಡಲಾಗುತ್ತಿತ್ತು. ಈ ಬಗ್ಗೆ ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಉಡುಪಿ ಜಿಲ್ಲಾಡಳಿತವು ಸಕಾರತ್ಮಕ ಸ್ಪಂದನೆ ನೀಡಿತ್ತು. ಆಗಿನ ಜಿಲ್ಲಾಧಿಕಾರಿ ಅವರು ಖುದ್ದಾಗಿ ನಲ್ಲೂರು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದ್ದರು.