ಉಡುಪಿ, ಡಿ. 31 (DaijiworldNews/AA): ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಸೈಬರ್ ವಂಚಕರು ಶಾಸಕರ ಹೆಸರಿನಲ್ಲಿ ಅವರ ಸಂಪರ್ಕದಲ್ಲಿರುವವರಿಗೆ ಹಣಕ್ಕಾಗಿ ಸಂದೇಶ ಕಳುಹಿಸುತ್ತಿದ್ದಾರೆ.

ಕಿಡಿಗೇಡಿಗಳು ಶಾಸಕರ ವಾಟ್ಸಾಪ್ ಖಾತೆ ಹ್ಯಾಕ್ ಮಾಡಿ, ಅವರ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿರುವವರ ಸಂಖ್ಯೆಗೆ ಮೆಸೇಜ್ ಮಾಡಿ ಹಣದ ಬೇಡಿಕೆ ಇಟ್ಟಿದ್ದಾರೆ. ಕೆಲವು ವ್ಯಕ್ತಿಗಳಿಗೆ ಮೆಸೇಜ್ ಮಾಡಿ, ನಿಮ್ಮಿಂದ ನನಗೆ ಒಂದು ಅಗತ್ಯ ಸಹಾಯವಾಗಬೇಕು ಎಂದು ಹೇಳಿ, ಆ ಬಳಿಕ ಹಣದ ಅವಶ್ಯಕತೆಯಿದೆ ಎಂದು ವಂಚಕರು ಮೆಸೇಜ್ ಮಾಡಿದ್ದಾರೆ.
ವಾಟ್ಸಾಪ್ ಹ್ಯಾಕ್ ಆಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಶಾಸಕರು, ತಮ್ಮ ಸ್ನೇಹಿತರು ಮತ್ತು ಆಪ್ತರಿಗೆ ಜಾಗರೂಕರಾಗಿರುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತು ಶಾಸಕರ ಕಚೇರಿಯೂ ಪ್ರಕಟಣೆ ಹೊರಡಿಸಿದ್ದು, "ಹ್ಯಾಕ್ ಮಾಡಲಾದ ಸಂಖ್ಯೆಯಿಂದ ಅನೇಕ ಜನರಿಗೆ ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ಸಂದೇಶಗಳು ಬಂದಿವೆ. ಸಾರ್ವಜನಿಕರು ಇಂತಹ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು ಮತ್ತು ಹಣವನ್ನು ಕಳುಹಿಸಬಾರದು" ಎಂದು ಮನವಿ ಮಾಡಿದೆ.