ಕಾರ್ಕಳ, ಡಿ. 31 (DaijiworldNews/AA): ಆರು ತಿಂಗಳ ಹಿಂದೆ ಸಂಭವಿಸಿದ ವೈದ್ಯರ ನಿರ್ಲಕ್ಷ್ಯ ಘಟನೆಯ ಕುರಿತು ಉಡುಪಿ ಜಿಲ್ಲಾ ಸರ್ಜನ್ ನೀಡಿದ ವರದಿಯ ಆಧಾರದಲ್ಲಿ ಕಾರ್ಕಳ ಖಾಸಗಿ ಆಸ್ಪತ್ರೆಯ ಮೂವರು ವೈದ್ಯರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವಿಪರೀತ ಹೊಟ್ಟೆನೋವು ಕಾಣಿಸಿಕೊಂಡ ಕಾರಣಕ್ಕೆ ಝಬೇದಾ (52) ಎಂಬವರು ಮೇ 10ರಂದು ಕಾರ್ಕಳ ಖಾಸಗಿ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಡ್ರಿಪ್ಸ್ ಹಾಕಿದ್ದರು. ಈ ವೇಳೆ ವೈದ್ಯರು ಬಂದು ಪರಿಶೀಲಿಸುವಂತೆ ಝುಬೇದಾರ ಪುತ್ರಿ ಮುಬೀನಾ ಕೇಳಿಕೊಂಡರು.
ಬಳಿಕ ಬಂದ ಡಾ.ನಾಗರತ್ನಾ ಕೂಡಲೇ ಆಪರೇಷನ್ ಮಾಡಬೇಕು. ಝುಬೇದಾರ ಜೀವಕ್ಕೆ ಅಪಾಯ ಇದೆ ಎಂದು ಹೇಳಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಯ ಆಪರೇಷನ್ ಥಿಯೇಟರ್ಗೆ ಕರೆದುಕೊಂಡು ಹೋಗಿದ್ದು, ಡಾ.ನಾಗರತ್ನ, ಡಾ.ರಹತುಲ್ಲಾ ಹಾಗೂ ಡಾ.ತುಷಾರ ಥಿಯೇಟರ್ ಒಳಗೆ ಹಾಜರಿದ್ದರು. ಬಳಿಕ ಹೊರ ಬಂದ ಡಾ.ರಹತುಲ್ಲಾ, ಝುಬೇದಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಝಬೇದಾರಿಗೆ ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಹಾಗೂ ಸರಿಯಾಗಿ ಪರೀಕ್ಷೆ ಮಾಡದೇ ನಿರ್ಲಕ್ಷ್ಯತನದಿಂದ ಆಪರೇಷನ್ ಮಾಡಿದ್ದಾರೆ ಎಂದು ಆರೋಪಿಸಿ ಪುತ್ರಿ ಮುಬೀನಾ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಮೃತ ಝಬೇದಾರ ನಿಧನದ ಬಗ್ಗೆ ಹಾಗೂ ವೈದ್ಯಾಧಿಕಾರಿಯವರ ನಿರ್ಲಕ್ಷ್ಯತೆಯ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಎಚ್.ಅಶೋಕ್ ಪರಿಶೀಲನೆ ನಡೆಸಿ ವರದಿ ನೀಡಿದ್ದರು.
ಈ ವರದಿಯಲ್ಲಿ ಆರೋಪಿ ವೈದ್ಯಾಧಿಕಾರಿಗಳು ಆಪರೇಶನ್ ಮಾಡುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇರುವುದು. ಸಾಕಷ್ಟು ಕಾಲಾವಕಾಶ ಇದ್ದರೂ ರೋಗಿಯ ಸ್ಥಿತಿಗತಿಯ ಬಗ್ಗೆ ರೋಗಿಯ ಸಂಬಂಧಪಟ್ಟವರಿಗೆ ಮಾಹಿತಿ ನೀಡದೇ ಇರುವುದು ಕಂಡು ಬಂದಿದೆ.
ಅದೇ ರೀತಿ ರೋಗಿ ಆಪರೇಷನ್ ಆಗುವಾಗಲೇ ಮೃತಪಟ್ಟಿರುವುದು ವೈದ್ಯಾಧಿಕಾರಿಗಳ ಲಿಖಿತ ಹೇಳಿಕೆಯಿಂದ ದೃಢಪಟ್ಟಿದೆ. ಅದರಂತೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ನಿರ್ಲಕ್ಷ್ಯತನ ಮೇಲ್ನೋಟಕ್ಕೆ ಕಂಡು ಬಂದಿರುವುದು ಈ ವರದಿ ಅಭಿಪ್ರಾಯಪಟ್ಟಿದೆ. ಅದರಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಮೂವರು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.