ಉಡುಪಿ, ಡಿ. 31 (DaijiworldNews/AA): ಖಾಸಗಿ ಬಸ್ಸೊಂದು ಗುಡ್ಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಮೃತಪಟ್ಟು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಹುಲಿಕಲ್ ಘಾಟ್ನಲ್ಲಿ ಡಿಸೆಂಬರ್ 30ರ ತಡರಾತ್ರಿ ನಡೆದಿದೆ.

ಕುಂದಾಪುರ ಮೂಲದ ಖಾಸಗಿ ಮಾಲೀಕತ್ವದ ಈ ಬಸ್ ದಾವಣಗೆರೆಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಚಾಲಕನಿಗೆ ನಿದ್ದೆ ಮಂಪರು ಆವರಿಸಿದ್ದರಿಂದ ವಾಹನದ ಮೇಲಿನ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಗಾಯಗೊಂಡವರನ್ನು ಶರೀಫಾಬಿ (57), ಇಮಾಮ್ ಸಾಬ್ (73) ಮತ್ತು ಸಫಾನ (28) ಎಂದು ಗುರುತಿಸಲಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗಳು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.