ಪುತ್ತೂರು, ಡಿ. 31 (DaijiworldNews/TA): ಪುತ್ತೂರು ಕಸಬಾದಲ್ಲಿ 84 ವರ್ಷದ ನಿವೃತ್ತ ಪ್ರಾಂಶುಪಾಲ ಎ.ವಿ. ನಾರಾಯಣ ಅವರ ಮನೆಗೆ ಮಧ್ಯರಾತ್ರಿ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಆರೋಪದ ಮೇಲೆ ಕಾರ್ತಿಕ್ ರಾವ್ (31) ಹಾಗೂ ಅವರ ಪತ್ನಿ ಕೆ.ಎಸ್. ಸ್ವಾತಿ ರಾವ್ (25) ಅವರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಿರ್ಯಾದಿದಾರ ನಾರಾಯಣ ಅವರ ದೂರಿನಂತೆ, ಡಿಸೆಂಬರ್ 17ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಹೆಲ್ಮೆಟ್ ಧರಿಸಿ ಮುಖವನ್ನು ಮರೆಮಾಚಿಕೊಂಡಿದ್ದ ಇಬ್ಬರು ಅಪರಿಚಿತರು ಮನೆಯ ಹಿಂಬಾಗಿಲಿನ ಮೂಲಕ ಒಳಪ್ರವೇಶ ಮಾಡಿ, ನಾರಾಯಣ ಹಾಗೂ ಅವರ ಪತ್ನಿಯನ್ನು ಬೆದರಿಸಿ ಬೆಲೆಬಾಳುವ ವಸ್ತುಗಳನ್ನು ಕದಿಯಲು ಯತ್ನಿಸಿದ್ದಾರೆ. ಈ ವೇಳೆ ನಡೆದ ತಳ್ಳಾಟದಲ್ಲಿ ನಾರಾಯಣ ಅವರ ಪತ್ನಿಗೆ ಗಾಯಗಳಾಗಿದ್ದು, ನಾರಾಯಣ ಅವರು ಜೋರಾಗಿ ಕಿರುಚಿದ್ದಾರೆ.
ಗದ್ದಲದಿಂದ ಭಯಗೊಂಡ ಆರೋಪಿಗಳು ಯಾವುದೇ ಸೊತ್ತುಗಳನ್ನು ಕಳ್ಳತನ ಮಾಡದೆ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ. ಈ ಕುರಿತು ನಾರಾಯಣ ಅವರ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 127/2025 ಅನ್ನು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಸೆಕ್ಷನ್ 307 ಹಾಗೂ 3(5)ರ ಅಡಿಯಲ್ಲಿ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಪೊಲೀಸರು ಆರೋಪಿಗಳಾಗಿ ಪುತ್ತೂರು/ಮುಡೂರು ನಿವಾಸಿ, ಪ್ರಸ್ತುತ ಪಂಜದಲ್ಲಿ ಬಾಡಿಗೆ ವಾಸವಾಗಿರುವ ಕಾರ್ತಿಕ್ ರಾವ್ ಮತ್ತು ಅವರ ಪತ್ನಿ ಸ್ವಾತಿ ರಾವ್ ಅವರನ್ನು ಬಂಧಿಸಿದ್ದಾರೆ. ಬಂಧಿತ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.