ಸುಳ್ಯ, ಡಿ. 31 (DaijiworldNews/AA): ವ್ಯಕ್ತಿಯೋರ್ವರಿಗೆ ಕಿರುಕುಳ ನೀಡಿ, ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ಕಸಬ ನಿವಾಸಿ ಮೊಹಮ್ಮದ್ ರಫೀಕ್ (41), ಸುಳ್ಯ ಸಂಪಾಜೆ ನಿವಾಸಿ ಮನೋಹರ್ ಕೆ ಎಸ್ ಯಾನೆ ಮನು (42) ಎಂಬುವವರನ್ನು ದಸ್ತಗಿರಿ ಮಾಡಲಾಗಿದೆ.
ಪ್ರಕರಣದ ತನಿಖೆ ನಡೆಸಲಾಗಿ, ಆರೋಪಿ ಮೊಹಮ್ಮದ್ ರಫೀಕ್ ಹಾಗೂ ಇನ್ನೋರ್ವ ಆರೋಪಿ ಮನೋಹರ್ ಕೆ.ಎಸ್ ಯಾನೆ ಮನು ಎಂಬುವವರನ್ನು ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ಮುಂದಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿರುತ್ತದೆ. ಕೃತ್ಯಕ್ಕೆ ಬಳಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು,
ಪ್ರಕರಣದ ದೂರುದಾರರಾದ ಸುಳ್ಯ ಕಸ್ಬಾ ಗ್ರಾಮದ ನಿವಾಸಿ ಸುಮಯ್ಯಾ (35) ಎಂಬವರ ದೂರಿನಂತೆ, ಅವರ ಗಂಡ ಅಬ್ದುಲ್ ಜಬ್ಬಾರ್ ಎಂಬವರನ್ನು, 2025ರ ಅ. 16 ರಂದು ಮಧ್ಯಾಹ್ನ ವೇಳೆ, ಆರೋಪಿಗಳಾದ ಮೊಹಮ್ಮದ್ ರಫೀಕ್ ಮತ್ತು ಇತರರು, ಬಾಡಿಗೆಯ ನೆಪದಲ್ಲಿ ದುಗ್ಗಲಡ್ಕ ಎಂಬಲ್ಲಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿ, ಅಲ್ಲಿಂದ ಸುಳ್ಯ ಕಲ್ಲುಗುಂಡಿಗೆ ಕರೆತಂದು ಮಾರಣಾಂತಿಕ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿ ಕಳುಹಿಸಿರುತ್ತಾರೆ.
ಮುಂದುವರಿದಂತೆ 2025ರ ಅ.17 ರಂದು ಪಿರ್ಯಾದುದಾರರ ಗಂಡ ಅಬ್ದುಲ್ ಜಬ್ಬಾರ್ ಮನೆಯಲ್ಲಿದ್ದಾಗ ಅನಾರೋಗ್ಯಕ್ಕೀಡಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ದೂರುದಾರರ ಗಂಡ ಅಬ್ದುಲ್ ಜಬ್ಬಾರ್ನ ಸಾವಿಗೆ ರಫೀಕ್ ಪಡು ಮತ್ತು ಇತರರು ಕಾರಣರಾಗಿರುತ್ತಾರೆ ಎಂಬುದಾಗಿ ಅ. 18 ರಂದು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 125/2025, ಕಲಂ: 105 ಜೊತೆಗೆ 3(5) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳು ನಡೆಸಿದ ಹಲ್ಲೆಯ ಪರಿಣಾಮ ಅಬ್ದುಲ್ ಜಬ್ಬಾರ್ ಅವರು ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿರುವುದರಿಂದ ಪ್ರಸ್ತುತ ಈ ಪ್ರಕರಣವನ್ನು ಕಲಂ: 103 ಜೊತೆಗೆ 3(5) ಬಿಎಸ್ಎಸ್ ರಂತೆ ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿರುತ್ತದೆ.