ಶ್ರೀನಗರ, ಡಿ 12: ಜಮ್ಮು ಮತ್ತು ಕಾಶ್ಮೀರದ ಗುರೇಜ್ ಸೆಕ್ಟರ್ ನ ಬಕ್ತೂರ್ ಪೋಸ್ಟ್ ಬಳಿ ಭಾರಿ ಹಿಮಪಾತ ಸಂಭವಿಸಿದ್ದು ಭಾರತೀಯ ಸೇನೆಯ ಮೂವರು ಯೋಧರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಭಾರತೀಯ ಸೇನಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್ ನಲ್ಲಿ ಪಹರೆ ಕಾಯುತ್ತಿದ್ದ ಮೂವರು ಯೋಧರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ನಾಪತ್ತೆಯಾಗಿರುವ ಯೋಧರಿಗೆ ಶೋಧ ಕಾರ್ಯ ಆರಂಭಿಸಲಾಗಿದ್ದು, ಮೂವರು ಯೋಧರು ಹಿಮಪಾತದಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಗುರೇಜ್ ಸೆಕ್ಟರ್ ನ ಬಕ್ತೂರ್ ಪೋಸ್ಟ್ ಬಳಿ ಭಾರಿ ಹಿಮದ ಗೆಡ್ಡೆಗಳು ಭಾರತೀಯ ಪೋಸ್ಟ್ ಗಳ ಕ್ಯಾಂಪ್ ಮೇಲೆ ಬಿದ್ದಿವೆ. ಪರಿಣಾಮ ಅಲ್ಲಿ ಕರ್ತವ್ಯ ನಿರತರಾಗಿದ್ದ ಮೂವರು ಯೋಧರು ನಾಪತ್ತೆಯಾಗಿದ್ದು, ಪ್ರಸ್ತುತ ಸೇನೆಯ ನುರಿತ ತಜ್ಞರು ನಾಪತ್ತೆಯಾಗಿರುವ ಯೋಧರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲ ಋತುವಿನ ಮೊದಲ ಹಿಮಪಾತ ಇದಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಹಿಮಮಳೆ ಅಡ್ಡಿಯಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.