ಉಡುಪಿ, ಜು 12 (Daijiworld News/MSP): ತಿಥಿಯ ಸಂದರ್ಭದಲ್ಲಿ ಹಿಂದೂ ಧರ್ಮದಲ್ಲಿ 'ಕಾಗೆ'ಗೇ ಪ್ರಾಶಸ್ತ್ಯವಿದೆ. ತಿಥಿಯ ಕೂಳನ್ನು ಕಾಗೆಗಳು ಹಾರಿ ಬಂದು ತಿಂದರೆನೇ ಮೃತರ ಆತ್ಮಕ್ಕೇ ತೃಪ್ತಿಯಾಯಿತು ಎಂಬ ನಂಬಿಕೆ ಪುರಾತನವಾದದ್ದು. ಆದರೆ ಈ ಕಾಲದಲ್ಲಿ ಕಾಗೆ ಎಲ್ಲಿ ಸ್ವಾಮಿ ಎನ್ನಬೇಡಿ. ಯಾಕೆಂದರೆ ಇವರನ್ನು ಸಂಪರ್ಕಿಸಿದರೆ ತಿಥಿಗೆ ಕಾಗೆಯೂ ಸಿಗುತ್ತದೆ. ಹೌದು ಆಶ್ಚರ್ಯಪಡಬೇಡಿ ಉಡುಪಿಯ ಕಾಪು ಸಮೀಪದ ಮಲ್ಲಾರ್, ಕೊಂಬಗುಡ್ಡೆಯ ಪ್ರಶಾಂತ್ ಪೂಜಾರಿ ಎಂಬವರು ಕಾಗೆ ಸಾಕಿ ಸೈ ಎಣಿಸಿಕೊಂಡಿದ್ದಾರೆ. ತಿಥಿ ದಿನ ಕಾಗೆ ಉತ್ತರಕ್ರಿಯೆಯ ಊಟ ತಿನ್ನದೆ ಮೃತರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ ಎಂದು ನೊಂದುಕೊಳ್ಳುವ ಮನೆಮಂದಿ ಇವರನ್ನು ಸಂಪರ್ಕಿಸಿದರೆ ಇವರು ಸಾಕಿದ ಕಾಗೆ ತಿಥಿ ಊಟ ತಿನ್ನುವ ಸೇವೆಗೆ ಹಾಜರಾಗುತ್ತದೆ.
ಕಾಪುವಿನಲ್ಲಿ ಕ್ಲಾಸಿಕ್ ಹೆಸರಿನ ಟೈಲರ್ ಅಂಗಡಿ ನಡೆಸುತ್ತಿರುವ ಪ್ರಶಾಂತ್, ಜೊತೆಗೆ ಮೀನು ಹಿಡಿಯುವುದು, ಲ್ಯಾಂಡ್ಲಿಂಕ್ಸ್ ಮೊದಲಾದ ಕೆಲಸಮಾಡುತ್ತಾರೆ. ಇದಕ್ಕಿಂತಲೂ ಹೆಚ್ಚಾಗಿ ಇವರಿಗೆ ಪ್ರಾಣಿ ಪಕ್ಷಿಗಳೆಂದರೆ ಬಲುಇಷ್ಟ.
ತಮ್ಮ ಮನೆಯ ಸಮೀಪದಲ್ಲೆ ಇದ್ದ ತೆಂಗಿನ ಮರದಿಂದ ಮೂರು ಕಾಗೆ ಮರಿಗಳು ಬಿದ್ದಿದ್ದವು, ಇದನ್ನು ಕಂಡ ಪಕ್ಷಿಪ್ರಿಯರಾದ ಪ್ರಶಾಂತ್ ಅದನ್ನು ಮನೆಗೆ ತಂದು ಸಾಕಿದ್ದಾರೆ. ಆದರೆ ಕೆಲ ದಿನದಲ್ಲೇ ಅರೋಗ್ಯದ ಏರುಪೇರಿನಿಂದ ಎರಡು ಕಾಗೆ ಮರಿಗಳು ಸಾವನ್ನಪ್ಪಿದೆ.ಇನ್ನುಳಿದ ಒಂದು ಮರಿಯನ್ನು ಜತನದಿಂದಲೇ ಸಾಕಿ ಬೆಳೆಸಿದ್ದಾರೆ. ಜತೆಗೆ ಆ ಕಾಗೆಗೆ ‘ರಾಜ’ ಎಂದು ಹೆಸರು ನೀಡಿದ್ದಾರೆ. ಈಗ ಪ್ರಶಾಂತ್ ಹಾಗೂ ರಾಜ ನಡುವೆ ಉತ್ತಮ ನಂಟು ಬೆಳೆದಿದೆಯಂತೆ.
ವೈಕುಂಠ ಸಮಾರಾಧನೆಯ ದಿನ ಪಿತೃಗಳಿಗೆ ಬಡಿಸುವ ಆಹಾರವನ್ನು ಕಾಗೆ ತಿನ್ನಲೇಬೇಕಾದ ಅನಿವಾರ್ಯತೆಯಿರುವ ಕಾರಣ ಹೀಗಾಗಿ ಅವರು ತಿಥಿ ಸೇವೆಗೆ ಕಾಗೆಯನ್ನು ಒದಗಿಸಲು ಯೋಚನೆ ಮಾಡಿದ್ದಾರೆ. ಈ ವಿಚಾರವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಇತ್ತೀಚೆಗೆ ನಂಬಿಕೆಗಳು ಇನ್ನೂ ಜೀವಂತವಾಗಿರುವಾಗ ಮತ್ತು ಎಲ್ಲಾ ನಂಬಿಕೆಗಳೂ ವ್ಯಾಪಾರೀಕರಣದ ಸರಕುಗಳಾಗಿ ಕ್ರಮೇಣ ಮಾರ್ಪಾಡಾಗುತ್ತಿರುವ ವರ್ತಮಾನದಲ್ಲಿ ಕಾಗೆಯನ್ನು ಸಹ ಏಕೆ ಬಂಡವಾಳವನ್ನಾಗಿ ಮಾಡಿಕೊಳ್ಳಬಾರದು ಇವರ ಯೋಚನೆ ಮೆಚ್ಚಲೇಬೇಕು.