ಮಂಗಳೂರು, ಜ. 02 (DaijiworldNews/AA): ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಪೊಲೀಸರು ನಡೆಸಿದ ತೀವ್ರ ನಿಗಾ ಮತ್ತು ತಪಾಸಣೆ ವೇಳೆ 52 ವ್ಯಕ್ತಿಗಳು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಇದರೊಂದಿಗೆ ಮೂವರು ಡ್ರಗ್ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರನ್ನು ಮಾದಕ ಮುಕ್ತ ನಗರವನ್ನಾಗಿಸುವ ನಿರಂತರ ಪ್ರಯತ್ನದ ಭಾಗವಾಗಿ, ಗುರುವಾರ ರಾತ್ರಿ ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. 1,000ಕ್ಕೂ ಹೆಚ್ಚು ಶಂಕಿತ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಲಾಯಿತು. ಒಟ್ಟು 52 ಮಂದಿ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದೆ.
ಪತ್ತೆಯಾದವರಲ್ಲಿ 25 ವಿದ್ಯಾರ್ಥಿಗಳಿದ್ದಾರೆ (ಇವರಲ್ಲಿ ಇಬ್ಬರು ಸ್ಥಳೀಯರು ಹಾಗೂ 23 ಮಂದಿ ಹೊರಜಿಲ್ಲೆಯವರು). ಉಳಿದ 27 ಮಂದಿಯಲ್ಲಿ 17 ಕಾರ್ಮಿಕರು ಮತ್ತು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ 10 ವ್ಯಕ್ತಿಗಳು ಸೇರಿದ್ದಾರೆ.
ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಪೊಲೀಸರು ಭಾರಿ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಒರ್ವ ಯುವಕನನ್ನು ಬಂಧಿಸಿ ಅವನಿಂದ 50 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಬುಧವಾರ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ಬಳಿಯಿದ್ದ 200 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಬಂಧಿತ ಮೂವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, "ಈ ಕಾರ್ಯಾಚರಣೆಯ ಮೂಲಕ ಡ್ರಗ್ಸ್ ಸೇವಿಸುವವರು ಮತ್ತು ಮಾರಾಟ ಮಾಡುವವರ ಜಾಲದ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಇದು ಮುಂಬರುವ ದಿನಗಳಲ್ಲಿ ಈ ಜಾಲವನ್ನು ಸಂಪೂರ್ಣವಾಗಿ ನಾಶಗೊಳಿಸಲು ಸಹಕಾರಿಯಾಗಲಿದೆ. 'ಮಾದಕ ಮುಕ್ತ ಮಂಗಳೂರು' ಅಭಿಯಾನಕ್ಕೆ ಇದು ದೊಡ್ಡ ಯಶಸ್ಸು" ಎಂದು ತಿಳಿಸಿದ್ದಾರೆ.