ಮಂಗಳೂರು, ಜ. 02 (DaijiworldNews/AA): ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆ ಎಂಬಲ್ಲಿ ಎಮ್ಮೆ ಹಾಗೂ ಹಸುಗಳನ್ನು ಹೊಂದಿದ್ದ ವ್ಯಕ್ತಿಯೋರ್ವರ ಸುಲಿಗೆಗೆ ಯತ್ನಿಸಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.

ಅಂಗಾರಗುಡ್ಡೆಯ ನಿವಾಸಿ ಅಬೂಬಕ್ಕರ್ ಎಂಬುವವರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ. ಅಬೂಬಕ್ಕರ್ ಅವರ ಬಳಿ ಮೂವರು ಜೋಡಿ ಎಮ್ಮೆ, ಹಾಲು ನೀಡುವ ಐದು ಹಸುಗಳು ಹಾಗೂ ಇನ್ನಿತರ ಎತ್ತು-ಎಮ್ಮೆಗಳನ್ನು ಸಾಕುತ್ತಿದ್ದರು. ಇತ್ತೀಚೆಗೆ ಅವರ ಎಮ್ಮೆಗಳು ಕಂಬಳ ಕೂಟದಲ್ಲಿ ಬಹುಮಾನ ಗೆದ್ದಿದ್ದವು.
ಪಕ್ಕದ ಗ್ರಾಮದಿಂದ ಬಂದಿದ್ದ ಮೂವರು ಆರೋಪಿಗಳು ಅಬೂಬಕ್ಕರ್ ಅವರಿಂದ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಬೂಬಕ್ಕರ್ ಅವರ ತಂದೆ ಶಂಶುದ್ದೀನ್ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಅಬೂಬಕ್ಕರ್ ಅವರು ಮಧ್ಯಪ್ರವೇಶಿಸಿ ತಂದೆಯನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಾಮದ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ಅಬೂಬಕ್ಕರ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಸೌಹಾರ್ದತೆಯಿಂದ ಜೀವನ ನಡೆಸುತ್ತಿರುವ ಗ್ರಾಮಸ್ಥರು, ಅಬೂಬಕ್ಕರ್ ಅವರ ಕುಟುಂಬದೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಸಹಕರಿಸಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಮತ್ತೊರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳ ಪೈಕಿ ಒರ್ವ ತಾನು ಸಂತ್ರಸ್ತನೆOದು ಬಿಂಬಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದ ಎನ್ನಲಾಗಿದೆ. ಆದರೆ, ಘಟನೆಯ ವೀಡಿಯೋಗಳು ಲಭ್ಯವಿದ್ದು, ಸತ್ಯಾಂಶ ಬಯಲಿಗೆ ಬಂದಿದೆ.
ಬಂಧಿತರ ಪೈಕಿ ಇಬ್ಬರು ಆರೋಪಿಗಳ ಮೇಲೆ ಈಗಾಗಲೇ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಭ್ಯವಿರುವ ಎಲ್ಲಾ ವೀಡಿಯೋ ತುಣುಕುಗಳನ್ನು ಪರಿಶೀಲಿಸಿದ ನಂತರ ಹೆಚ್ಚಿನ ಮಾಹಿತಿ ಬೆಳಕಿಗೆ ಬರಲಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.